ನವದೆಹಲಿ: ಕರ್ನಾಟಕ ಸೇರಿದಂತೆ ಕೋವಿಡ್-19 ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುತ್ತಿರುವ ರಾಜ್ಯಗಳಿಗೆ ತಜ್ಞರನ್ನು ಒಳಗೊಂಡ ತಂಡಗಳನ್ನು ಕೇಂದ್ರ ಸರ್ಕಾರ ಕಳುಹಿಸಿದೆ.
ಮಹಾರಾಷ್ಟ್ರ, ಕೇರಳ, ಗುಜರಾತ್, ಪಂಜಾಬ್, ಛತ್ತೀಸಗಡ, ಮಧ್ಯಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಹಾಗೂ ಜಮ್ಮು-ಕಾಶ್ಮೀರಗಳಲ್ಲಿ ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಈ ತಂಡಗಳು ಆಯಾ ರಾಜ್ಯಗಳಿಗೆ ನೆರವು ನೀಡಲಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಸಚಿವಾಲಯದ ಜಂಟಿ ಕಾರ್ಯದರ್ಶಿ ಹುದ್ದೆಗೆ ಸಮಾನ ಸ್ಥಾನದಲ್ಲಿರುವ ಅಧಿಕಾರಿಗಳ ನೇತೃತ್ವದ ಈ ತಂಡಗಳಲ್ಲಿ ಮೂವರು ಸದಸ್ಯರು ಇರಲಿದ್ದು, ಈ ತಂಡ ಅಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿನ ವೈದ್ಯಕೀಯ ತಂಡದೊಂದಿಗೆ ಕಾರ್ಯ ನಿರ್ವಹಿಸುವವು ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೋವಿಡ್ ನಿಯಂತ್ರಣಕ್ಕೆ ತರಲು ಈ ವರೆಗೆ ಮಾಡಿರುವ ಶ್ರಮ ವ್ಯರ್ಥವಾಗಬಾರದು. ಕೋವಿಡ್ ಪ್ರಸರಣ ಸರಪಳಿಯನ್ನು ತುಂಡರಿಸಲು ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಬೇಕು, ಆರ್‌ಟಿಪಿಸಿಆರ್ ಪರೀಕ್ಷೆಗಳನ್ನು ಹೆಚ್ಚಿಸಿ, ತುರ್ತು ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಕೋವಿಡ್ ದೃಢಪಟ್ಟ ವ್ಯಕ್ತಿಯನ್ನು ಕೂಡಲೇ ಪ್ರತ್ಯೇಕವಾಸ ಮಾಡುವಂತೆ ನೋಡಿಕೊಳ್ಳಬೇಕು ಇಲ್ಲವೇ ಆಸ್ಪತ್ರೆಗೆ ದಾಖಲಿಸಬೇಕು. ಆ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದವರಿಗೆ ಯಾವುದೇ ವಿಳಂಬವಿಲ್ಲದೇ ಪರೀಕ್ಷೆಗೆ ಒಳಪಡಿಸಬೇಕು ಎಂದೂ ಸೂಚಿಸಲಾಗಿದೆ.
ಮಾರ್ಗಸೂಚಿಯಂತೆ ಕ್ರಮಗಳನ್ನು ಕೈಗೊಳ್ಳದಿದ್ದರೆ, ರೂಪಾಂತರಗೊಂಡ ವೈರಸ್‌ನಿಂದ ಭಾರಿ ತೊಂದರೆ ಅನುಭವಿಸಬೇಕಾಗುತ್ತದೆ ಎಂದೂ ಕೇಂದ್ರ ಎಚ್ಚರಿಸಿದೆ.