ಕಾಸರಗೋಡು: ಐಕ್ಯರಂಗ ಅಧಿಕಾರಕ್ಕೇರಿದಲ್ಲಿ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯ ಉದ್ಘಾಟನೆಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ರಾಜ್ಯ ವಿಪಕ್ಷ ಮುಖಂಡ ರಮೇಶ್ ಚೆನ್ನಿತ್ತಲ ತಿಳಿಸಿದ್ದಾರೆ.
ಐಶ್ವರ್ಯ ಕೇರಳ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾಸರಗೋಡಿಗೆ ಆಗಮಿಸಿರುವ ಅವರು ಸೋಮವಾರ ಸುದ್ದಿಗಾರರ ಜತೆ ಮಾತನಾಡಿದರು.
ಜಿಲ್ಲೆಯ ಜನತೆಯ ಆಶಾಕಿರಣವಾಗಬೇಕಾಗಿದ್ದ ಕಾಸರಗೋಡು ವೈದ್ಯಕೀಯ ಕಾಲೇಜಿನ ಕಾಮಗಾರಿಯನ್ನು ಎಡರಂಗ ಸರ್ಕಾರ ನಿಧಾನಗತಿಯಲ್ಲಿ ಸಾಗುವಂತೆ ಮಾಡಿರುವುದಲ್ಲದೆ, ಕಳೆದ ಬಜೆಟ್‍ನಲ್ಲಿ ಚಿಕ್ಕಾಸೂ ಮೀಸಲಿರಿಸದೆ ಜಿಲ್ಲೆಯ ಜನತೆಗೆ ವಂಚನೆಯೆಸಗಿದೆ. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಗಾಗಿ ಕಳೆದ ಐದು ವರ್ಷದಲ್ಲಿ ಎಡರಂಗ ಸರ್ಕಾರ ಸಮಗ್ರ ಯೋಜನೆ ಕೈಗೊಂಡಿಲ್ಲ. ಕಾಸರಗೋಡು ಜಿಲ್ಲೆಯ ಹಿಂದುಳಿದಿರುವಿಕೆ ಹೋಗಲಾಡಿಸುವ ನಿಟ್ಟಿನಲ್ಲಿ ಜಾರಿಗೆ ತರಲಾದ ಡಾ. ಪ್ರಭಾಕರನ್ ವರದಿಯನ್ನೂ ಸರ್ಕಾರ ನಿರ್ಲಕ್ಷಿಸಿದೆ. ಅಲ್ಲದೆ ಜಿಲ್ಲೆಯ ಎಂಡೋಸಲ್ಫಾನ್ ಸಂತ್ರಸ್ತರಿಗೆ ಮೂಲಸೌಕರ್ಯ ಸಹಿತ ಪುನರ್ವಸತಿ ಕಲ್ಪಿಸುವಲ್ಲಿ ಸರ್ಕಾರ ಪರಾಜಯಗೊಂಡಿರುವುದಾಗಿ ತಿಳಿಸಿದರು. ಕೇರಳ ರಾಜ್ಯವನ್ನು ಕೋಮು ಧ್ರುವೀಕರಣದತ್ತ ಸಾಗಿಸಲು ಎಡರಂಗ ಶ್ರಮಿಸುತ್ತಿದ್ದು, ಇದಕ್ಕೆ ಬಿಜೆಪಿಯನ್ನೂ ಜತೆಗೂಡಿಸುತ್ತಿದೆ ಎಂದು ಆರೋಪಿಸಿದರು.