ಕಾಸರಗೋಡು: ಕೇರಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೊಷಣೆಗೂ ಮುನ್ನ ರಾಜ್ಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿ ಖಜಾನೆ ಲೂಟಿ ಮಾಡುವುದು ಸರ್ಕಾರದ ಕುಟಿಲ ತಂತ್ರವಾಗಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ.
ವಿಜಯ ಯಾತ್ರೆ ಕಾರ್ಯಖ್ರಮದಲ್ಲಿ ಪಾಲ್ಗೊಳ್ಳಲು ಕಾಸರಗೋಡಿಗೆ ಭೇಟಿ ನೀಡಿರುವ ಇವರು ಶನಿವಾರ ಸಉದ್ದಿಗಾರರ ಜತೆ ಮಾತನಾಡಿದರು. ಆಳಸಮುದ್ರ ಮೀನುಗಾರಿಕಾ ಒಪ್ಪಂದದಲ್ಲಿ ಮೀನುಗಾರಿಕಾ ಸಚಿವೆ ಮರ್ಸಿಕುಟ್ಟಿಯಮ್ಮ ನಡೆಸಿದ್ದಾರೆನ್ನಲಾದ ಭ್ರಷ್ಟಾಚಾರ ಸರ್ಕಾರದ ಖಜಾನೆ ಲೂಟಿಯ ಒಂದು ಭಾಗವಾಗಿದೆ. ರಾಜ್ಯದ ಎಲ್ಲಾ ವಲಯದಲ್ಲೂ ಭ್ರಷ್ಟಾಚಾರ ವ್ಯಾಪಕಗೊಂಡಿದೆ. ಕೇರಳದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರಂತರ ಚಿಂತನೆ ನಡೆಸುತ್ತಿರುವ ಕೇಂದ್ರ ಸರ್ಕಾರ, ಶುಕ್ರವಾರ ಆರು ಸಾವಿರ ಕೋಟಿ ರೂ. ಮೊತ್ತದ ಬೃಹತ್ ಯೋಜನೆಗಳನ್ನು ನಾಡಿಗೆ ಸಮರ್ಪಿಸಿದೆ. ರಾಜ್ಯವನ್ನು ಅಭಿವೃದ್ಧಿಯ ಪಥದತ್ತ ಸಾಗಿಸಲು ಕೇಂದ್ರ ಸರ್ಕಾರ ನಡೆಸುತ್ತಿರುವ ಸಾಧನೆಯನ್ನು ಕೇರಳ ಸರ್ಕಾರ ಅಭಿನಂದಿಸುವ ಬದಲು ಕೇಂದ್ರದ ಕೊಡುಗೆಯನ್ನು ಜನರಿಂದ ಮರೆಮಾಚಲು ಯತ್ನಿಸುತ್ತಿರುವುದಾಗಿ ಆರೋಪಿಸಿದರು. ವಿಜಯ ಯಾತ್ರೆ ಸಂದರ್ಭ ಎಡರಂಗ ಸರ್ಕಾರದ ಭ್ರಷ್ಟಾಚಾರ ಮತ್ತು ಪ್ರತಿಪಕ್ಷದ ವೈಫಲ್ಯವನ್ನು ಜನರ ಮುಂದಿಡಲಾಗುವುದು. ಯಾವುದೇ ಹುದ್ದೆಯ ಆಕಾಂಕ್ಷಿಯಾಗದೆ, ಪಾರ್ಟಿ ಸಿದ್ಧಾಂತ ಒಪ್ಪಿಕೊಂಡು ಪಕ್ಷ ಸೇರ್ಪಡೆಗೊಂಡಿರುವ ಇ.ಶ್ರೀಧರನ್ ಅವರಂತಹ ಮಹಾನ್ ವ್ಯಕ್ತಿಗಳು ಮುಂದಿನ ದಿನಗಳಲ್ಲಿ ಎನ್‍ಡಿಎ ಸೇರ್ಪಡೆಗೆ ತಯಾರಾಗಿದ್ದಾರೆ ಎಂದು ತಿಳಿಸಿದರು.