ಕಾಸರಗೋಡು: ಭಾರತದ ಅತ್ಯಂತ ಎತ್ತರದ ಶಿವ ಕ್ಷೇತ್ರವು ಅಸ್ಸಾಮಿನ ನೌಗಾವ್ ಜಿಲ್ಲೆಯ ಪುರಾಣಿ ಗೋದಾಮ್ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಫೆಬ್ರವರಿ 22ರಿಂದ ಮಾರ್ಚ್ 3 ರ ವರೆಗೆ ನಡೆಯುವ ಪ್ರತಿಷ್ಠಾ ಕರ್ಮಗಳಿಗೆ ಕಾಸರಗೋಡಿನ ಪೆರಿಯ ಸಮೀಪದ ಗೋಕುಲಮ್ ಗೋಶಾಲೆಯ ಸಂಚಾಲಕರಾಗಿರುವ ವಿಷ್ಣು ಪ್ರಸಾದ್ ಹೆಬ್ಬಾರ್ ಪೂಚಕ್ಕಾಡ್ ಅವರು ಪೂಜಾಕರ್ಮಗಳ ನೇತೃತ್ವ ವಹಿಸಲಿದ್ದಾರೆ.
ತಿರುವನಂತಪುರ ಪದ್ಮನಾಭ ಸ್ವಾಮೀ ಕ್ಷೇತ್ರ ಪೆರಿಯ ನಂಬಿ ಅವರ ಪುತ್ರ, ನೀಲೇಶ್ವರ ಕಕ್ಕಟ್ಟಿಲ್ಲಮ್‍ನ ವಿನೀತ್ ಪಟ್ಟೇರಿ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದ ಪ್ರಧಾನ ಅರ್ಚಕ ನರಸಿಂಹ ಅಡಿಗ ಮೊದಲಾದವರು ನೇತೃತ್ವ ವಹಿಸುತ್ತಾರೆ. 250 ಮಂದಿ ವೈದಿಕ ಶ್ರೇಷ್ಠರು ಪ್ರತಿಷ್ಠಾ ಕಾರ್ಯ ನಡೆಸಲು ಅಸ್ಸಾಮಿಗೆ ಈಗಾಗಲೇ ತೆರಳಿರುತ್ತಾರೆ. 136 ಅಡಿ ಎತ್ತರವಿರುವ ಶಿವಲಿಂಗದ ಆಕೃತಿಯಲ್ಲಿರುವ ಕ್ಷೇತ್ರದಲ್ಲಿ ಮಹಾ ಮೃತ್ಯುಂಜಯ ದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗುತ್ತದೆ.
ಹಿರಣ್ಯ ಕಶ್ಯಪ ತಪಸ್ಸು ಮಾಡಿರುವುದಾಗಿ ನಂಬಿಕೆ ಇರುವ ಪುರಾಣ ಪ್ರಸಿದ್ಧ ಸ್ಥಳವಾಗಿರುತ್ತದೆ ಈ ಜಾಗದಲ್ಲಿ ಶತ ಚಂಡಿಕಾ ಹೋಮ, ಚತುರ್ವೇದ ಪಾರಾಯಣ, ದಶಲಕ್ಷ ಮೃತ್ಯುಂಜಯ ಜಪ, ಒಂದು ಲಕ್ಷ ಮಹಾ ಮೃತ್ಯುಂಜಯ ಹೋಮ, ಮಹಾ ರುದ್ರ, ಸಹಸ್ರ ಕಲಶಾಭಿಷೇಕ ಮೊದಲಾದ ಕೇರಳೀಯ ತಾಂತ್ರಿಕ ಕ್ರಿಯೆಗಳು ಜರಗಲಿವೆ. ಹದಿನೈದರಷ್ಟು ವಾದ್ಯಘೋಷ ಕಲಾವಿದರು, ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಗೋವಾ ರಾಜ್ಯಗಳಿಂದ ವೇದಪಂಡಿತರು ಪ್ರತಿಷ್ಠಾ ಕಾರ್ಯಗಳಲ್ಕಿ ಭಾಗವಹಿಸುತ್ತಿದ್ದಾರೆ.
ವಿಷ್ಣು ಹೆಬ್ಬಾರ್ ಅವರು ಕಳೆದ 10 ವರ್ಷಗಳಿಂದ ಅಸ್ಸಾಂ ಹಣಕಾಸು ಖಾತೆ ಸಚಿವ ಹಿಮಂತ ವಿಶ್ವಶರ್ಮ ಇವರ ಆಧ್ಯಾತ್ಮಿಕ ಜ್ಯೋತಿಷ್ಯದ ಉಪದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಚಿವರು ಅಧ್ಯಕ್ಷರಾಗಿರುವ ಆಚರಣಾ ಸಮಿತಿ ಇದ್ದು ಪ್ರತಿಷ್ಠಾ ಕಾರ್ಯಗಳಿಗೆ ಈ ಸಮಿತಿ ನೇತೃತ್ವ ವಹಿಸುತ್ತಿದೆ.
ಕೇರಳೀಯ ಶೈಲಿಯ ವಾದ್ಯ ಘೋಷಗಳಾದ ಚೆಂಡೆ ಮೇಳ, ಪಂಚ ವಾದ್ಯ, ಸೋಪಾನ ಸಂಗೀತ ಈ ಕಾರ್ಯಗಳಲ್ಲಿ ಪ್ರಸ್ತುತಿಗೊಳ್ಳಲಿದೆ. 27 ಕ್ಕೆ ಪ್ರತಿಷ್ಠಾ ಕಾರ್ಯವು ಜರಗಲಿದೆ.