ನವದೆಹಲಿ: ಭಾರತದಲ್ಲಿ ಮತ್ತೆ ತೈಲೋತ್ಪನ್ನಗಳ ದರಗಳು ಗಗನದತ್ತ ಮುಖ ಮಾಡಿದ್ದು, ಇಂದು ಮತ್ತೆ ಪೆಟ್ರೋಲ್, ಡೀಸೆಲ್ ದರಗಳು ದಾಖಲೆ ಮಟ್ಟಕ್ಕೇರಿವೆ.
ಭಾರತದಲ್ಲಿ ತೈಲೋತ್ಪನ್ನಗಳ ದರಗಳಲ್ಲಿ 35 ಪೈಸೆಯಷ್ಟು ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ 35 ಪೈಸೆ ಏರಿಕೆಯಾಗಿ 87.30 ರೂ ಗೆ ಏರಿಕೆಯಾಗಿದೆ. ಇದು ದಾಖಲೆ ಗರಿಷ್ಠ ಮಟ್ಟವಾಗಿದೆ. ಡೀಸೆಲ್ ದರ ಕೂಡ 77.48ರೂ ಗೆ ಏರಿಕೆಯಾಗಿದೆ.
ಮುಂಬೈನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 93.83 ಏರಿಕೆಯಾಗಿದ್ದು, ಡೀಸೆಲ್ ದರ 84.36ರೂ ಗೆ ಏರಿಕೆಯಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಪೆಟ್ರೋಲ್ ದರ ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 89.83ರೂ ಹಾಗೂ ಡೀಸೆಲ್ ಬೆಲೆ 82.79 ರೂ ಗೆ ಏರಿಕೆಯಾಗಿದೆ.
ಬೆಲೆ ಏರಿಕೆಗೆ ಕಚ್ಚಾತೈಲ ದರ ಏರಿಕೆ ಕಾರಣ:
ಇಂದಿನ ತೈಲೋತ್ಪನ್ನಗಳ ದರಗಳ ಏರಿಕೆಗೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆ ಕಾರಣ ಎನ್ನಲಾಗಿದೆ. ಬ್ರೆಂಟ್ ಕಚ್ಚಾ ತೈಲ ಸೋಮವಾರ ಪ್ರತಿ ಬ್ಯಾರಲ್‌ಗೆ 60 ಡಾಲರ್ ತಲುಪಿದೆ. ಇದು ಈ ವರ್ಷದ ಗರಿಷ್ಠ ಮಟ್ಟವಾಗಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಯು ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.