ನವದೆಹಲಿ: 'ಪ್ರತಿಭಟನೆಯ ಹಕ್ಕು ಇದೆ ಎಂದ ಮಾತ್ರಕ್ಕೆ, ಅದನ್ನು ಬೇಕುಬೇಕಾದಾಗ, ಎಲ್ಲೆಂದರಲ್ಲಿ ಬಳಸಲಾಗದು' ಎಂದು ಸುಪ್ರೀಂ ಕೋರ್ಟ್ ಶನಿವಾರ ಹೇಳಿದೆ.
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನವದೆಹಲಿಯ ಶಾಹೀನ್ ಬಾಗ್‌ನಲ್ಲಿ ಕಳೆದ ವರ್ಷ ನಡೆದಿದ್ದ ಪ್ರತಿಭಟನೆಯನ್ನು ಕುರಿತು ತಾನು ನೀಡಿದ್ದ ತೀರ್ಪಿನ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ದೀರ್ಘ ಕಾಲದವರೆಗೆ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ತಡೆ ಒಡ್ಡಿದ್ದನ್ನು ಆಕ್ಷೇಪಿಸಿದ್ದ ನ್ಯಾಯಾಲಯವು, 'ಈ ರೀತಿಯ ಪ್ರತಿಭಟನೆಯನ್ನು ಸ್ವೀಕರಿಸಲಾಗದು' ಎಂದಿತ್ತು.
ಲೋಕಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮರುರಚನೆ (ತಿದ್ದುಪಡಿ) ಮಸೂದೆ ಮಂಡನೆ
ಕೆಲವೊಮ್ಮ ತಕ್ಷಣದ ಪ್ರತಿಭಟನೆಗಳು ನಡೆಯುತ್ತವೆ. ಆದರೆ, ಪ್ರತಿಭಟನೆಯು ದೀರ್ಘ ಕಾಲ ಮುಂದುವರಿದರೆ, ಸಾರ್ವಜನಿಕ ರಸ್ತೆಯಲ್ಲಿ ಸತತವಾಗಿ ಸಂಚಾರವನ್ನು ತಡೆಯುವುದರಿಂದ ಇತರರ ಹಕ್ಕುಗಳಿಗೆ ಅಡ್ಡಿಪಡಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡಿರುವ ನ್ಯಾಯಪೀಠ ಹೇಳಿದೆ.
'ಮೇಲ್ಮನವಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪರಿಗಣಿಸಿದ್ದೇವೆ. ಯಾವ ವಿಚಾರದಲ್ಲಿ ಅರ್ಜಿದಾರರು ಮರು ಪರಿಶೀಲನೆಯನ್ನು ಕೋರಿದ್ದಾರೋ, ಅದರಲ್ಲಿ ಬದಲಾವಣೆ ಮಾಡುವ ಅಗತ್ಯ ಕಾಣಿಸುತ್ತಿಲ್ಲ' ಎಂದಿರುವ ಪೀಠವು ಅರ್ಜಿಯನ್ನು ವಜಾ ಮಾಡಿದೆ.
ತೀರ್ಪು ಮರು ಪರಿಶೀಲನೆಗೆ ಕೋಡಿ ಶಾಹೀನ್ ಬಾಗ್ ನಿವಾಸಿ ಖನಿಜ್ ಫಾತಿಮಾ ಮತ್ತು ಇನ್ನಿತರರು ಕಳೆದ ವರ್ಷ ಅಕ್ಟೋಬರ್ 7ರಂದು ಅರ್ಜಿ ಸಲ್ಲಿಸಿದ್ದರು.