ನವದೆಹಲಿ: ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿಗಳು ಮಾಡಿದ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಬುಧವಾರ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಅಂಗೀಕರಿಸಲಾಗಿದೆ.
ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸಿದ ಕೂಡಲೇ, ಸ್ಪೀಕರ್ ಓಂ ಬಿರ್ಲಾ ಅವರು ಪ್ರತಿಪಕ್ಷದ ಸದಸ್ಯರು ಮಂಡಿಸಿದ ಎಲ್ಲಾ ತಿದ್ದುಪಡಿಗಳನ್ನು ಮತಕ್ಕೆ ಹಾಕಿದರು. ಆದರೆ ಆ ಎಲ್ಲಾ ತಿದ್ದುಪಡಿಗಳನ್ನು ಧ್ವನಿ ಮತದ ಮೂಲಕ ತಿರಸ್ಕರಿಸಲಾಯಿತು.
ಪ್ರಧಾನಿ ಮೋದಿ ಅವರು ಮೂರು ಹೊಸ ಕೃಷಿ ಕಾಯ್ದೆಗಳ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಮೋದಿ ಭಾಷಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು, ಸದನದಿಂದ ಹೊರನಡೆದರು. ಬಳಿಕ ಟಿಎಂಸಿ ಸಹ ಮೋದಿಯವರ ಉತ್ತರಕ್ಕೆ ತೃಪ್ತರಾಗಿಲ್ಲ ಎಂದು ಹೇಳಿ ಹೊರನಡೆದರು.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದ ಮೇಲಿನ ವಂದನಾ ನಿರ್ಣಯವನ್ನು ಕೆಳಮನೆಯಲ್ಲಿ ಅಂಗೀಕರಿಸಿದಾಗ ಮೂರು ಪಕ್ಷಗಳ ಸದಸ್ಯರು ಹಾಜರಿರಲಿಲ್ಲ.