ಉಪ್ಪಳ: ಕೇರಳದಲ್ಲಿ ಪೌರತ್ವ ಕಾಯ್ದೆ ಜಾರಿಗೆ ತರಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಪೌರತ್ವ ಕಾಯ್ದೆಯನ್ನು ಯಾವ ಕಾರಣಕ್ಕೂ ಕೇರಳದಲ್ಲಿ ಜಾರಿಗೊಳಿಸಬಹುದೆಂಬ ಚಿಂತನೆ ಇದ್ದರೆ ಅದು ನನಸಾಗದು. ಬೇರೆಡೆ ಏನು ಮಾಡಲಾಗಿದೆ ಎಂದು ಅವರು ಪ್ರಶ್ನಿಸಿದರು.
ಎಲ್.ಡಿ.ಎಫ್. ಹಮ್ಮಿಕೊಂಡಿರುವ ಉತ್ತರ ಮಲಬಾರ್ ಪ್ರಾದೇಶಿಕ ಪ್ರಚಾರ ಅಭಿಯಾನದ ಜಾಥಾವನ್ನು ಶನಿವಾರ ಸಂಜೆ ಉಪ್ಪಳದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ವ್ಯಾಕ್ಸಿನೇಷನ್ ನಂತರ ದೇಶದಲ್ಲಿ ನಾಗರಿಕರ ತಿದ್ದುಪಡಿ ಕಾಯ್ದೆ ಜಾರಿಗೆ ಬರಲಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತಿವೆ. ಗೃಹ ಸಚಿವರೇ ಹಾಗೆ ಹೇಳಿದ್ದಾರೆ. ಅವರು ಒಂದು ನಿಲುವನ್ನು ತೆಗೆದುಕೊಂಡಿದ್ದಾರೆ. ಕೇರಳದಲ್ಲಿ ಇದನ್ನು ಬೆಂಬಲಿಸಲಾಗದು ಎಂದು ಮುಖ್ಯಮಂತ್ರಿ ಹೇಳಿದರು.
ದೇಶದ ಅಭಿವೃದ್ಧಿಯ ಬಗ್ಗೆ ಚರ್ಚಿಸಬೇಕು. ಕೋಮು ಭಾವನೆ ಕೆರಳಿಸುವ ವಿಷಯದ ಬಗ್ಗೆ ಚರ್ಚಿಸಲು ಪ್ರಯತ್ನಿಸುವುದರಿಂದ ಕೋಮುವಾದದ ಬೆಳವಣಿಗೆಗೆ ಮಾತ್ರ ಕಾರಣವಾಗುತ್ತದೆ ಎಂದು ಮುಖ್ಯಮಂತ್ರಿ ಸೂಚಿಸಿದರು. ಕೋಮುವಾದವು ಅಪಾಯಕಾರಿ. ಅದನ್ನು ತೊಡೆದುಹಾಕಬೇಕು. ಆರ್.ಎಸ್.ಎಸ್. ದೇಶದ ಪ್ರಬಲ ಕೋಮು ಕೆರಳಿಸುವ ಶಕ್ತಿಯಾಗಿದೆ ಎಂದು ಅವರು ತಿಳಿಸಿದರು.
ಎಸ್.ಡಿ.ಪಿ.ಐ.ನಂತಹ ಜನರು ಇದನ್ನು ಎದುರಿಸಲು ಅಲ್ಪಸಂಖ್ಯಾತ ಕೋಮು ನಿಲುವನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಮತ್ತಷ್ಟು ಅಪಾಯಕಾರಿಯಾದುದು. ಕೋಮುವಾದಿ ಶಕ್ತಿಗಳನ್ನು ಈ ರೀತಿ ಎದುರಿಸಲು ಸಾಧ್ಯವಿಲ್ಲ. ಅದಕ್ಕಾಗಿ ಎಡಪಂಥೀಯ ಚಿಂತನೆಯೊಂದೇ ಮಾರ್ಗ ಎಂದು ಮುಖ್ಯಮಂತ್ರಿ ಜನರಿಗೆ ಕರೆ ನೀಡಿದರು. ಇದರಿಂದ ನಿಜವಾದ ಅಲ್ಪಸಂಖ್ಯಾತರ ಕಲ್ಯಾಣವನ್ನು ಜಾರಿಗೆ ತರಲು ಸಾಧ್ಯ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ಎಡಪಂಥೀಯರ ಬಲದಿಂದಾಗಿ ಕೇರಳ ಇಂದು ದೇಶಕ್ಕೆ ಮಾದರಿಯಾಗಿದೆ. ಜನರನ್ನು ಕೋಮುವಾದಿ ನೆಲೆಯಲ್ಲಿ ಪ್ರತ್ಯೇಕಿಸಲು ಪ್ರಯತ್ನಿಸುವ ಜಮಾತೆ-ಇ-ಇಸ್ಲಾಮಿ ಮತ್ತು ಎಸ್‍ಡಿಪಿಐ, ಆರ್‍ಎಸ್‍ಎಸ್‍ನಂತೆಯೇ ಕೆಲಸ ಮಾಡುತ್ತಿವೆ. ಎರಡೂ ಕೋಮುವಾದವನ್ನು ಬಲಪಡಿಸುತ್ತಿವೆ. ಈ ಎಲ್ಲಾ ಶಕ್ತಿಗಳಿಗೆ ಎಲ್ಡಿಎಫ್ ವಿರುದ್ಧವಾಗಿವೆ ಎಂದರು.
ಕಾಂಗ್ರೆಸ್ ನಾಯಕರು ಬಿಜೆಪಿ ಏನು ಮಾಡುತ್ತಿದೆ ಎಂಬ ಬಗ್ಗೆ ಆಸಕ್ತಿ ವಹಿಸುತ್ತಿಲ್ಲ. ಕಾಂಗ್ರೆಸ್ಸ್ ಶಾಸಕರೊಬ್ಬರು ದೇಣಿಗೆಯೊಂದಿಗೆ ಕೋಮುವಾದಿ ಸಂಘಟನೆಗೆ ಮಾರುಹೋಗಿರುವುದು ಇತ್ತೀಚಿನ ವಿದ್ಯಮಾನವಾಗಿದೆ. ಕೋಮುವಾದದ ಬಗ್ಗೆ ರಾಜಿಯಾಗದ ಮನೋಭಾವವನ್ನು ಎಡಪಂಥೀಯರು ಎತ್ತಿಹಿಡಿಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಎಲ್.ಡಿ.ಎಫ್ ಕನ್ವೀನರ್ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಎ.ವಿಜಯರಾಘವನ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಚಿವ ಇ.ಚಂದ್ರಶೇಖರನ್, ಕೆ.ಪಿ.ರಾಜೇಂದ್ರನ್(ಸಿಪಿಐ), ನ್ಯಾಯವಾದಿ.ವಿ.ಸತೀದೇವಿ(ಸಿಪಿಎಂ),ವಿ.ಟಿ.ಜೋಸ್(ಕೇರಳ ಕಾಂಗ್ರೆಸ್ಸ್ ಎಂ), ವಿ.ಕೆ.ರಾಜನ್(ಎನ್.ಸಿ.ಪಿ), ಬಾಬು ಗೋಪಿನಾಥ್(ಕಾಂಗ್ರೆಸ್ಸ್ ಎಸ್), ಕೆ.ಲೋಹ್ಯ(ಜನತಾದಳ ಎಸ್.), ಕೆ.ವಿ.ಮೋಹನನ್((ಲೋಕ್ ತಾಂತ್ರಿಕ್ ಜನತಾದಳ್), ಜೋಸ್ ಚೆಂಬೇರಿ(ಕೇರಳ ಕಾಂಗ್ರೆಸ್ಸ್ ಬಿ), ಖಾಸಿಂ ಇರಿಕ್ಕೂರ್(ಐ.ಎಲ್.ಎಲ್) ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.