ಬದಿಯಡ್ಕ: ಪೆರಡಾಲ ನವಜೀವನ ಶಾಲಾ ಅಧ್ಯಾಪಿಕೆ ಸುಶೀಲ ಪದ್ಯಾಣ ಅವರಿಗೆ ಕವಿ ಗೋಪಾಲಕೃಷ್ಣ ಅಡಿಗ ಕಾವ್ಯ ಪುರಸ್ಕಾರ ಲಭಿಸಿದೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು- ಇದರ ಸಹಯೋಗದೊಂದಿಗೆ ಕನ್ನಡನಾಡಿನ ವಿವಿಧ ಜಿಲ್ಲೆಗಳಲ್ಲಿ ಇರುವ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ವಿವಿಧ ತಾಲೂಕು ಹಾಗೂ ಜಿಲ್ಲಾ ಘಟಕಗಳಿಂದ ಸುಮಾರು 46 ವಾರಗಳಿಂದ ಏರ್ಪಡಿಸುತ್ತಿರುವ ವಿವಿಧ ಸಾಹಿತ್ಯಕ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಾರಿ ಬಹುಮಾನ ವಿಜೇತೆ ಎಂಬ ಕಾರಣಕ್ಕೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಉಡುಪಿ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಉಡುಪಿಯ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಕತೆಗಾರ್ತಿ, ಬರಹಗಾರ್ತಿ ವೈದೇಹಿಯವರು ಶಾಲು ಹಾಕಿ, ಪೇಟ ತೊಡಿಸಿ, ಫಲಪುಷ್ಪ ನೀಡಿ ಸನ್ಮಾನಿಸಿದರು.
ಅಧ್ಯಾಪಕ ಪದ್ಯಾಣ ಚಂದ್ರಶೇಖರ ಭಟ್ಟರ ಪತ್ನಿಯಾಗಿರುವ ಇವರು ಮಂಗಳೂರು ಆಕಾಶವಾಣಿಯಲ್ಲಿ ಸಹಾಯಕ ಕಾರ್ಯನಿರ್ವಾಹಕಿಯಾಗಿ ಎರಡು ವರ್ಷ, ಮಡಿಕೇರಿಯ ಕೆ. ಎಂ. ಕಾರ್ಯಪ್ಪ ಪದವಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಎರಡು ವರ್ಷ, ಪ್ರಸ್ತುತ ಕೇರಳದ ಕಾಸರಗೋಡು ಜಿಲ್ಲೆಯ ನವಜೀವನ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಿಕೆಯಾಗಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.