ಬದಿಯಡ್ಕ: ಯಕ್ಷಭಾರತೀ ನೀರ್ಚಾಲು ಮತ್ತು ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇವರ ಸಹಯೋಗದೊಂದಿಗೆ "ಹಿರಿಯರ ನೆನಪು" ಕಾರ್ಯಕ್ರಮವು ಇತ್ತೀಚೆಗೆ ನೀರ್ಚಾಲು ಶ್ರೀ ಕುಮಾರಸ್ವಾಮಿ ಸಭಾಭವನದಲ್ಲಿ ಜರಗಿತು. ಯಕ್ಷಭಾರತೀ ನೀರ್ಚಾಲು ಇದರ ಗೌರವಾಧ್ಯಕ್ಷರಾದ ಡಾ. ಬೇ.ಸೀ. ಗೋಪಾಲಕೃಷ್ಣ ಭಟ್ಟರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡಮಿ ಬೆಂಗಳೂರು ಇದರ ಸದಸ್ಯ ರಾಧಾಕೃಷ್ಣ ಕಲ್ಚಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯರ ನೆನಪಲ್ಲಿ; ಹಿರಿಯ ಅರ್ಥಧಾರಿ ದಿ. ಗೋವಿಂದ ಭಟ್ ಸೂರಂಬೈಲು ಅವರ ಸಂಸ್ಮರಣೆ ಮಾಡಲಾಯಿತು. ಸಂಸ್ಮರಣಾ ಭಾಷಣ ಮಾಡಿದ ಹಿರಿಯ ಅರ್ಥಧಾರಿ ಬೆಳ್ಳಿಗೆ ನಾರಾಯಣ ಮಣಿಯಾಣಿಯವರು ಮಾತನಾಡಿ, ಗೋವಿಂದ ಭಟ್ಟರು ಜೀವನದಲ್ಲಿ ಕಡು ಬಡತನವಿದ್ದರೂ ಯಕ್ಷಗಾನದಲ್ಲಿ ಅಪಾರ ಒಲವು ಮತ್ತು ಅಧಮ್ಯ ಉತ್ಸಾಹ ಹೊಂದಿದ್ದ ಎಲೆಮರೆಯ ಕಾಯಿಯಂತಿದ್ದ, ಖಂಡಿತವಾಗಿಯೂ ಒಬ್ಬ ಸಹೃದಯಿ ದೀಮಂತ ವ್ಯಕ್ತಿಯಾಗಿದ್ದರು. ಅಪಾರ ಪಾಂಡಿತ್ಯವನ್ನೂ ಹೊಂದಿದವರಾಗಿದ್ದರು, ಅವರ ಒಡನಾಟ ಹಿರಿಯರಿಗೂ-ಕಿರಿಯರಿಗೂ ಮಾತಿನಲ್ಲಿ ಹೇಳಲಸಾಧ್ಯವಾದ ಅನುಭವ ನೀಡುತ್ತಿತ್ತು ಎಂದು ನೆನಪಿಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ "ಗರುಡ ಗರ್ವಭಂಗ" ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮವು ಜರಗಿತು. ಭಾಗವತರಾಗಿ ಶ್ರೀ ವೆಂಕಟ್ರಾಜ ಕೆ.ಯಂ., ತಲ್ಪಣಾಜೆ ಶಿವಶಂಕರ ಭಟ್, ಸುರೇಶ್ ಆಚಾರ್ಯ ನೀರ್ಚಾಲು, ಚೆಂಡೆ-ಮದ್ದಳೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್, ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಅರ್ಥಧಾರಿಗಳಾಗಿ ರಾಧಾಕೃಷ್ಣ ಕಲ್ಚಾರ್, ಪಕಳಕುಂಜ ಶ್ಯಾಮ ಭಟ್, ಹರೀಶ ಬಳಂತಿಮೊಗರು, ಡಾ| ಬೇ.ಸೀ.ಗೋಪಾಲಕೃಷ್ಣ ಭಟ್, ರಾಜಾರಾಮ ಕುಂಜಾರು ಭಾಗವಹಿಸಿದರು.
ತಲ್ಪಣಾಜೆ ಶಿವಶಂಕರ ಭಟ್ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದಲ್ಲಿ ಬಾಲಕೃಷ್ಣ ಆಚಾರ್ಯ ನೀರ್ಚಾಲು ಸ್ವಾಗತಿಸಿದರು. ರಾಜಾರಾಮ ಕುಂಜಾರು ವಂದಿಸಿದರು. ವಿಷ್ಣುಪ್ರಕಾಶ್ ಪೆರ್ವ ನಿರೂಪಿಸಿದರು.