ನವದೆಹಲಿ : ಮಕ್ಕಳ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ವೈದ್ಯಕೀಯ ಪ್ರಯೋಗ ನಡೆಸುವ ಸಂಬಂಧ ಭಾರತ್ ಬಯೋಟೆಕ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರೀಯ ಔಷಧ ನಿಯಂತ್ರಣ ಸಂಸ್ಥೆ ತಿರಸ್ಕರಿಸಿದ್ದು, ಮೊದಲು ಕೊರೊನಾ ಲಸಿಕೆಯ ದಕ್ಷತೆ ಕುರಿತು ವರದಿ ನೀಡುವಂತೆ ತಿಳಿಸಿದೆ.
5ರಿಂದ 18 ವಯಸ್ಸಿನವರ ಮೇಲೆ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗಕ್ಕೆ ಅನುಮತಿ ಕೋರಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಬುಧವಾರ ಕೇಂದ್ರ ಔಷಧ ನಿಯಂತ್ರಣ ಸಂಸ್ಥೆ ತಜ್ಞರ ಸಮಿತಿ ಪರಿಶೀಲಿಸಿದ್ದು, ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸುವ ಮುನ್ನ ವಯಸ್ಕರ ಮೇಲೆ ಲಸಿಕೆ ಪ್ರಯೋಗದ ಫಲಿತಾಂಶ ಹಾಗೂ ದಕ್ಷತೆಯ ಕುರಿತು ಸಂಪೂರ್ಣ ವರದಿ ನೀಡುವಂತೆ ತಿಳಿಸಿದೆ.
"ಲಸಿಕೆಯ ದಕ್ಷತೆ ಮಾಹಿತಿ ನೀಡುವುದು ಆದ್ಯತೆಯ ವಿಷಯವಾಗಿದೆ. ಲಸಿಕೆಗೆ ಅನುಮತಿ ನೀಡುವುದಕ್ಕೂ ಮುನ್ನ ತಜ್ಞರಿಗೆ ಅಗತ್ಯ ಮಾಹಿತಿ ನೀಡಬೇಕು" ಎಂದು ಹೇಳಿದೆ.
ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದಿರುವ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಹಂತದ ಪ್ರಯೋಗ ಇನ್ನೂ ಪ್ರಗತಿಯಲ್ಲಿದ್ದು, ಲಸಿಕೆಯ ದಕ್ಷತೆ ಕುರಿತು ಸಂಸ್ಥೆ ವರದಿ ನೀಡಬೇಕಿದೆ.
ಕೊರೊನಾ ಸೋಂಕು ತಡೆಗಟ್ಟಲು ವಿಶ್ವದಾದ್ಯಂತ ಹಲವು ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಗಳನ್ನು ಜನರಿಗೆ ನೀಡಲಾಗುತ್ತಿದೆ. ಆದರೆ ಮಕ್ಕಳಿಗೆ ಕೊರೊನಾ ಸೋಂಕಿನ ಲಸಿಕೆಯು ಲಭ್ಯವಿಲ್ಲದಾಗಿದ್ದು, ಮಕ್ಕಳಿಗೆ ಕೊರೊನಾ ಲಸಿಕೆ ನೀಡುವ ಕುರಿತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಕೂಡ ಅಧ್ಯಯನ ನಡೆಸುತ್ತಿದೆ.