ಮುಂಬೈ: ರಿಲಯಸ್ನ್ ದಿಗ್ಗಜ ಮುಖೇಶ್ ಅಂಬಾನಿಯ ನಿವಾಸದ ಸಮೀಪ ಸ್ಫೋಟಕಗಳನ್ನು ಹೊಂದಿರುವ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಉದ್ಯಮಿ ಅಂಬಾನಿ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇಶನ್‌ನ ಸಂದೇಶದ ಮೂಲಕ ಉಗ್ರ ಸಾಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ನಾವೆಂದು ಘೋಷಿಸಿಕೊಂಡಿದೆ.
“ಅಂಬಾನಿ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‌ಯುವಿ ಇರಿಸಿದ ಸಹೋದರ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ. ಇದು ಕೇವಲ ಟ್ರೇಲರ್, ಬಿಗ್ ಸಿನಿಮಾ ಇನ್ನಷ್ಟೇ ಬರಲಿದೆ.”ಎಂದು ಸಂದೇಶದಲ್ಲಿ ಹೇಳಲಾಗಿದೆ.
ಉದ್ಯಮಿ ಮುಖೇಶ್ ಅಂಬಾಯವರ ದಕ್ಷಿಣ ಮುಂಬೈನಲ್ಲಿರುವ ನಿವಾಸದ ಬಳಿ ಜಿಲೆಟಿನ್ ಕಡ್ಡಿಗಳು, ಸ್ಫೋಟಕ ತುಂಬಿದ್ದ ನಕಲಿ ನಂಬರ್ ಪ್ಲೇಟ್ ಹೊಂದಿರುವ ವಾಹನ ಗುರುವಾರ ಪತ್ತೆಯಾಗಿತ್ತು.ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಅಂಬಾನಿಯ ಬಹುಮಹಡಿ ನಿವಾಸವಾದ “ಆಂಟಿಲಿಯಾ” ಬಳಿ ವಾಹನವನ್ನು ನಿಲ್ಲಿಸಲಾಗಿತ್ತು.
ಜೈಶ್-ಉಲ್-ಹಿಂದ್ ಮುಖೇಶ್ ಅಂಬಾನಿ ಬಳಿ ಬಿಟ್ ಕಾಯಿನ್ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದೆ.
ಕೆಲವು ದಿನಗಳ ಹಿಂದೆ ಅದೇ ಸಂಘಟನೆಯು ದೆಹಲಿಯ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಸ್ಫೋಟ ನಡೆಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಈ ಬಗೆಗೆ ಇಲ್ಲಿಯವರೆಗೆ, ಮುಂಬೈ ಪೊಲೀಸರಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.