ಬೆಂಗಳೂರು: ದುಬೈನಲ್ಲಿರುವ ವಿಶ್ವದ ಅತೀ ಎತ್ತರದ ಗಗನಚುಂಬಿ ಕಟ್ಟಡ ಬುರ್ಜ್ ಖಲೀಫಾ ಮೇಲೆ 'ಕಿಚ್ಚ' ಸುದೀಪ್ ರಾರಾಜಿಸಿದ್ದಾರೆ. ಭಾನುವಾರ ರಾತ್ರಿ ಸುದೀಪ್ ಅವರ 'ವಿಕ್ರಾಂತ್ ರೋಣ' ಚಿತ್ರದ ಶೀರ್ಷಿಕೆ ಲೋಗೋ ಮತ್ತವರ ಭಾವಚಿತ್ರ 2000 ಅಡಿಯ ಬೃಹತ್ ಕಟ್ಟಡದ ಮೇಲೆ 180 ಸೆಕೆಂಡ್ಗಳ ಕಾಲ ಸ್ಕ್ರೀನಿಂಗ್ ಆಗಿದೆ.
ಅಷ್ಟೇ ಅಲ್ಲ ಚಂದನವನದಲ್ಲಿ ಸುದೀರ್ಘ 25ವರ್ಷವನ್ನು ಪೂರೈಸಿದ ಹಿನ್ನೆಲೆಯಲ್ಲಿ ಇಡೀ ಭಾರತೀಯ ಸಿನಿಮಾರಂಗದಿಂದ ಶುಭಾಶಯಗಳ ಸುರಿಮಳೆಯೇ ಹರಿದು ಬಂದಿದೆ. ಮಲಯಾಳಂ ಸೂಪರ್ಸ್ಟಾರ್ ಮೋಹನ್ಲಾಲ್ ಕಿರು ವಿಡಿಯೋ ಹಂಚಿಕೊಂಡು ಶುಭ ಕೋರಿದ್ದಾರೆ. ಕನ್ನಡದಲ್ಲಿ ಶಿವರಾಜಕುಮಾರ್, ರಮೇಶ್ ಅರವಿಂದ್, ಉಪೇಂದ್ರ, ಗಣೇಶ್, ವಸಿಷ್ಟ ಸಿಂಹ ಸೇರಿ ಚಿತ್ರರಂಗದ ಹಲವರು ಶುಭಕೋರಿದ್ದಾರೆ. ಇತ್ತ 25 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 'ಸುದೀಪ್ ಸಾಂಸ್ಕೃತಿಕ ಪರಿಷತ್ತು' ಸುದೀಪ್ ಅವರ ಭಾವಚಿತ್ರವಿರುವ 25 ಗ್ರಾಂನ 1000 ಬೆಳ್ಳಿ ನಾಣ್ಯವನ್ನು ಹೊರತಂದಿದೆ. ಸುದೀಪ್ ಬೆಂಗಳೂರಿಗೆ ಮರಳುತ್ತಿದ್ದಂತೆ ಅವರಿಗೆ 100 ಗ್ರಾಂನ ನಾಣ್ಯವನ್ನು ವಿತರಿಸಲು ಪರಿಷತ್ತು ನಿರ್ಧರಿಸಿದೆ. ಬಳಿಕ ಅಭಿಮಾನಿಗಳೂ 25 ಗ್ರಾಂನ ನಾಣ್ಯವನ್ನು ಪಡೆದುಕೊಳ್ಳಬಹುದು ಎಂದು ಹೇಳಿಕೊಂಡಿದೆ.