ಬದಿಯಡ್ಕ: ನೀರ್ಚಾಲು ಬೇಳದ ವಿಷ್ಣುಮೂರ್ತಿ ನಗರ ಪರಿಸರದಲ್ಲಿ ಬಂಟ ಸಮುದಾಯದ ಮೂವರು ಸಹೋದರಿಯರು ಮಾತ್ರವಿರುವ ಕುಟುಂಬವು ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದು ಇವರಲ್ಲಿ ಓರ್ವೆ ಲಕ್ಷ್ಮೀ ಶೆಟ್ಟಿ ಇತ್ತೀಚೆಗೆ ಅಕಸ್ಮಿಕವಾಗಿ ಪಕ್ಷವಾತ ಬಾಧಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಮನೆಯಲ್ಲಿ ಹೆಂಗಸರು ಮಾತ್ರವಿದ್ದು ಜೀವನ ನಿರ್ವಹಣೆಗೆ ದಿನನಿತ್ಯ ಬೀಡಿ ಕಟ್ಟುತ್ತಿದ್ದಾರೆ. ಇದರೊಂದಿಗೆ ಸಹೋದರಿಗೆ ಅನಾರೋಗ್ಯವೂ ಬಂದೆರಗಿ ಪರರ ಸಹಾಯದಿಂದ ಚಿಕಿತ್ಸೆಯಲ್ಲಿದ್ದಾರೆ.
ಇವರ ಸಂಕಷ್ಟ ಸ್ಥಿತಿ ಮನಗಂಡು ಬದಿಯಡ್ಕ ಪಂಚಾಯತಿ ಬಂಟರ ಸಂಘದ ನೇತೃತ್ವದಲ್ಲಿ ಪ್ರಾಥಮಿಕ ಅವಶ್ಯಕತೆಯಾಗಿ ಮಲಗಲು ಮಂಚ ಮತ್ತು ಹಾಸಿಗೆ ಒದಗಿಸಲಾಯಿತು. ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ಪಿ.ಜಿ. ಚಂದ್ರಹಾಸ ರೈ,.ಕುಂಬಳೆ ಪಿರ್ಕ ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಶೆಟ್ಟಿ ವಳಮಲೆ, ಕಾರ್ಯದರ್ಶಿ ಅಶೋಕ ರೈ ಕೊರೆಕ್ಕಾನ, ಬದಿಯಡ್ಕ ಪಂಚಾಯತಿ ಬಂಟರ ಸಂಘದ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ವಳಮಲೆ, ಕಾರ್ಯದರ್ಶಿ ನಿರಂಜನ್ ರೈ ಪೆರಡಾಲ, ಪ್ರದೀಪ್ ಶೆಟ್ಟಿ ಬೇಳ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ,ಸಪ್ನ ಎಂ, ಉಪಸ್ಥಿತರಿದ್ದರು.
ಈ ಕುಟುಂಬದ ಬಗೆಗೆ ಸೇವಾ ಭಾರತಿ ನೀರ್ಚಾಲು ನೀಡಿದ ಮಾಹಿತಿಯನ್ನು ಬುಧವಾರ ಸಮರಸ ಸುದ್ದಿ ಪ್ರಕಟಿಸಿತ್ತು.