ಕಾಸರಗೋಡು: ಕಾಸರಗೋಡು ಜಿಲ್ಲೆಯ ಪ್ರಥಮ ಕೋವಿಡ್ ಪ್ರಕರಣ ಪತ್ತೆಗೆ ಒಂದು ವರ್ಷ ಪೂರ್ಣಗೊಂಡಿದೆ. ಜಾಗರೂಕತೆ ಕೈಬಿಡುವ ಸಮಯ ಇನ್ನೂ ಬಂದಿಲ್ಲ ಎಂಬುದನ್ನು ಮನಗಾಣಬೇಕಿದೆ.
2020 ಫೆ.3ರಂದು ವೂಹಾನ್ ನಿಂದ ಆಗಮಿಸಿದ ವೈದ್ಯಕೀಯ ವಿದ್ಯಾರ್ಥಿಯೊಬ್ಬರಿಗೆ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡಿತ್ತು. ಜಿಲ್ಲೆಯ ಪ್ರಥಮ ಪ್ರಕರಣವೂ ಇದೇ ಆಗಿತ್ತು. ನಂತರ ಮುಂದುವರಿದು ಈ ವರೆಗೆ ಒಟ್ಟು 26507 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 272 ಮಂದಿ ಕಳೆದ ಒಂದು ವರ್ಷದ ಅವಧಿಯಲ್ಲಿ ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮೃತಪಟ್ಟಿದ್ದರು.
ಆರಂಭದಿಂದಲೇ ನಡೆದಿದೆ ಸಶಕ್ತ ಪ್ರತಿರೋಧ:
ಕಾಸರಗೋಡು ಜಿಲ್ಲೆಯಲ್ಲಿ ಪ್ರಥಮ ಕೋವಿಡ್ ಖಚಿತಗೊಂಡಿದ್ದ ತಕ್ಷವೇ ಪ್ರತಿರೋಧ ಚಟುವಟಿಕೆಗಳೂ ಸಶಕ್ತಗೊಂಡಿದ್ದುವು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಈ ಚಟುವಟಿಕೆಗಳು ನಡೆದುಕೊಂಡು ಬಂದಿವೆ.
ಫೆ.16ರಂದು ಜಿಲ್ಲೆಯ ಮೊದಲ ಕೋವಿಡ್ ರೋಗಿ ಗುಣಮುಖರಾಗಿದ್ದರು. ಮಾ.16ರಂದು ಎರಡನೇ ಕೋವಿಡ್ ಪಾಸಿಟಿವ್ ಪ್ರಕರಣ ತಲೆದೋರಿತ್ತು. ತದನಂತರ ದಿನಂಪ್ರತಿ ಸೋಂಕು ಹಾವಳಿ ಹೆಚ್ಚುತ್ತಲೇ ಸಾಗಿತ್ತು. ಮಾ.22ರಂದು ರಾತ್ರಿ 9 ಗಂಟೆಯಿಂದ ಕಾಸರಗೋಡು ಜಿಲ್ಲೆಯ 17 ಪೆÇಲೀಸ್ ಠಾಣೆಗಳ ವ್ಯಾಪ್ತಿ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೆ ಬಂದಿತ್ತು.
ಮಾ.23ರಂದು ಜಿಲ್ಲೆಯಲ್ಲಿ ಬಿಗಿ ನಿಯಂತ್ರಣ ಏರ್ಪಡಿಸುವ ಸಂಬಂಧ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದರು. ಜಿಲ್ಲೆಯ ಪ್ರತಿರೋಧ ಚಟುವಟಿಕೆಗಳನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮಾ ಜಿಲ್ಲೆಗೆ ಆಗಮಿಸಿದ್ದರು. ಈ ಮೂಲಕ ಪ್ರತಿರೋಧ ಚಟುವಟಿಕೆಗಳಿಗೆ ಹೊಸರೂಪು ಲಭಿಸಿತ್ತು. ಈ ಕಾಲಾವಧಿಯಲ್ಲಿ ಐ.ಜಿ.ವಿಜಯ್ ಸಖಾರೆ ಅವರ ನೇತೃತ್ವದಲ್ಲಿ ಕಾನೂನು ಪಾಲನೆ ನಡೆದಿತ್ತು.
ಬಡಮಂದಿಗೆ ಈ ಅವಧಿಯಲ್ಲಿ ಸಮುದಾಯ ಅಡುಗೆಮನೆಗಳ ಮೂಲಕ ಆಹಾರ, ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ನಡೆಸಿದುದು ಲಾಕ್ ಡೌನ್ ಅವಧಿಯಲ್ಲಿ ಸಹಕಾರಿಯಾಗಿತ್ತು. ಜಿಲ್ಲೆಯ 7 ಗ್ರಾಮ ಪಂಚಾಯತ್ ಗಳಲ್ಲಿ ಕೋವಿಡ್ ಸೋಂಕು ಹಾವಳಿ ತೀವ್ರಗೊಂಡ ಹಿನ್ನೆಲೆಯಲ್ಲಿ ಆ ಪ್ರದೇಶಗಳಲ್ಲಿ ತ್ರಿವಳಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ನಿಯಂತ್ರಣಗಳ ಕಾರಣ ಮನೆಗಳಿಂದ ಹೊರಗಿಳಿಯಲಾಗದ ಮಂದಿಗೆ ನಿವಾಸಗಳಿಗೇ ಸಾಮಾಗ್ರಿಗಳನ್ನು ವಿತರಿಸುವ ವ್ಯವಸ್ಥೆ ನಡೆಸಲಾಗಿತ್ತು. ಪೆÇಲೀಸರು, ಅಗ್ನಿಶಾಮಕದಳ ಈ ನಿಟ್ಟಿನಲ್ಲಿ ನೂತನ ಅಧ್ಯಾಯ ಸೃಷ್ಟಿಸಿದ್ದರು. ದೇಶದ ಪ್ರಪ್ರಥಮ ಸಿ.ಎಫ್.ಎಲ್.ಟಿ.ಸಿ.ಯು ಪಡನ್ನಕ್ಕಾಡ್ ಕೇಂದ್ರೀಯ ವಿವಿ ಕಟ್ಟಡದಲ್ಲಿ ಆರಮಭಿಸಿದುದೂ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದಿತ್ತು.
ಪ್ರಥಮ ಕೋವಿಡ್ ಆಸ್ಪತ್ರೆ:
ಅತ್ಯುತ್ತಮ ಚಿಕಿತ್ಸೆ ಸೌಲಭ್ಯಗಳಿಲ್ಲದೆ ಬಳಲಿದ ಜಿಲ್ಲೆಯಲ್ಲಿ ಸಾಂತ್ವನ ರೂಪದಲ್ಲಿ ಏ.6ರಂದು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಕೋವಿಡ್ ಆಸ್ಪತ್ರೆ ಚಟುವಟಿಕೆ ಆರಂಭಿಸಿತ್ತು. ಕೋವಿಡ್ ಹರಡುವಿಕೆ ಪ್ರತಿರೋಧಿಸುವ ನಿಟ್ಟಿನಲ್ಲಿ ರಚಿಸಲಾದ ಕೇರ್ ಫಾರ್ ಕಾಸರಗೋಡು ಕ್ರಿಯಾ ಯೋಜನೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿತ್ತು. ಕೇಂದ್ರ ಆರೋಗ್ಯ ಮಂತ್ರಾಲಯ ಈ ಬಗ್ಗೆ ಮುಕ್ತ ಪ್ರಶಂಸೆ ನಡೆಸಿತ್ತು. ಜಿಲ್ಲೆಯಲ್ಲಿ ಒಗ್ಗಟ್ಟಿನಿಂದ ನಡೆಸಲಾದ ಯತ್ನಗಳ ಪರಿಣಾಮ ಮೇ 10ರಂದು ಕೋವಿಡ್ ಹರಡುವಿಕೆಯ ಎರಡನೇ ಹಂತದಲ್ಲಿ ಕೋವಿಡ್ ರೋಗಿಗಳು ಪೂರ್ಣರೂಪದಲ್ಲಿ ಗುಣಮುಖರಾದರು.
ಕೋವಿಡ್ ನ ಮೂರನೇ ಬಾರಿಯ ಆಗಮನ:
ಕೋವಿಡ್ ಸಂಬಂಧ ನಿಯಂತ್ರಣಗಳಲ್ಲಿ ಸಡಿಲಿಕೆ ನಡೆಸಿದ ಹಿನ್ನೆಲೆಯಲ್ಲಿ ಇತರ ರಾಜ್ಯಗಳಲ್ಲಿದ್ದವರು ಕಾಸರಗೋಡು ಜಿಲ್ಲೆಗೆ ಆಗಮಿಸತೊಡಗಿದ್ದರು. ಈ ಮೂಲಕ ಮತ್ತೆ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗತೊಡಗಿದುವು.ಮೇ ತಿಂಗಳ ಅರ್ಧದ ವೇಳೆ ಈ ರೋಗ ಹೆಚ್ಚಳ ತೀವ್ರಗೊಳ್ಳತೊಡಗಿತ್ತು. ಈ ಅವಧಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ವಿಶೇಷ ಕಾಳಜಿಯ ಹಿನ್ನೆಲೆಯಲ್ಲಿ ಸಮಾಜದ ಮೂಲೆ ಮೂಲೆಗಳಲ್ಲೂ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮಾಸ್ಟರ್ ಯೋಜನೆ ಅನುಷ್ಠಾನಗೊಳಿಸಲಾಯಿತು. ಕಾಸರಗೋಡು ಜಿಲೆಯಲ್ಲಿ ಈ ಯೋಜನೆ ನೀಡಿದ್ದ ಸಕಾರಾತ್ಮಕ ಪರಿಣಾಮದ ಹಿನ್ನೆಲೆಯಲ್ಲಿ ಈ ಯೋಜನೆ ರಾಜ್ಯಾದ್ಯಂತ ವಿಸ್ತರಣೆಗೊಳ್ದಳುವಂತಾಯಿತು. ರೋಗಿಗಳ ಹೆಚ್ಚಳ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ವಗೃಹಗಳಲ್ಲೇ ದಾಖಲಾತಿ ಚಿಕಿತ್ಸೆಯ ಸೌಲಭ್ಯ ಆರಂಭಿಸಲಾಯಿತು. ಕೋವಿಡ್ ಪ್ರತಿರೋಧ ಚಟುವಟಿಕೆಗಳನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಉಕಾರಿ ಅವರ ನೇತೃತ್ವದಲ್ಲಿ ಐ.ಇ.ಸಿ. ಸಂಚಲನ ಸಮಿತಿ ರಚನೆಗೊಂಡು ಚಟುವಟಿಕೆ ಆರಂಭಿಸಲಾಯಿತು.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಧಿಕಾರಿ ಎ.ವಿ.ರಾಮದಾಸ್ ಅವರ ನೇತೃತ್ವದಲ್ಲಿ ಪ್ರತಿರೋಧ ಚಟುವಟಿಕೆಗಳು ಪ್ರಬಲವಾಗಿ ನಡೆದ ಪರಿಣಾಮ ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ನವೆಂಬರ್ ತಿಂಗಳ ಬನಂತರ ಇಳಿಮುಖವಾಗಿದ್ದುವು. ಇಂದು ರಾಜ್ಯ ಮಟ್ಟದಲ್ಲಿ ಅತಿ ಕಡಿಮೆ ಕೋವಿಡ್ ಕೇಸ್ ಗಳು ಇರುವ ಜಿಲ್ಲೆ ಕಾಸರಗೋಡು ಆಗಿದೆ.
ತಲೆದೋರಿದೆ ನಿರ್ಲಕ್ಷ್ಯ:
ಕಾಸರಗೋಡು ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾದುದು, ಕೋವಿಡ್ ವಾಕ್ಸಿನ್ ಆಗಮಿಸಿದುದು, ನಿಯಂತ್ರಣಗಳಲ್ಲಿ ಸಡಿಲಿಕೆ ನಡೆಸಿರುವುದು ಇತ್ಯಾದಿ ಕಾರಣಗಳಿಂದ ಸಾರ್ವಜನಿಕ ವಲಯದಲ್ಲಿ ಜಾಗರೂಕತೆಯೂ ಕಡಿಮೆಯಾಗಲು ಕಾರಣವಾಗಿದೆ ಎಂಬುದು ಗಂಭೀರ ವಿಚಾರವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಜನ ಗುಂಪು ಸೇರುವುದು, ಮಾಸ್ಕ್ ಧರಿಸದೇ ಪ್ರಯಾಣ ನಡೆಸುವುದು ಇತ್ಯಾದಿ ಇಂದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ ಇತರೆಡೆಗಳಿಗೆ ಹೋಲಿಸಿದರೆ ಕಡಿಮೆ ಎಂಬುದೂ ಉದಾಸೀನತೆಗೆ ಕಾರಣವಾಗುತ್ತಿದೆ ಎಂಬುದೂ ಕಹಿಸತ್ಯ.
ಮಾಸ್ಕ್ ಧರಿಸದೇ ಇದ್ದದ್ದಕ್ಕೆ 12546 ಮಂದಿಗೆ ಕೇಸು:
ಕಾಸರಗೋಡು ಜಿಲ್ಲೆಯಲ್ಲಿ ಮಾಸ್ಕ್ ಧರಿಸದೇ ಇದ್ದ ಪ್ರಕರಣಗಳಿಗೆ ಸಂಬಂಧಿಸಿ ಈ ವರೆಗೆ ಒಟ್ಟು (ಜ.1ರಿಂದ ಫೆ.2 ವರೆಗೆ) 12546 ಮಂದಿಗೆ ಕೇಸು ದಾಖಲಿಸಿ, ದಂಡ ವಸೂಲಿ ನಡೆಸಲಾಗಿದೆ. ಈ ಹಿನ್ನೆಲೆಯಲ್ಲಿ ದಿನವೊಂದಕ್ಕೆ ಸರಾಸರಿ 370 ಕೇಸುಗಳನ್ನು ಪೆÇಲೀಸರು ದಾಖಲಿಸುತ್ತಿದ್ದಾರೆ ಎಂಬುದು ಗಂಭೀರ ಸಮಸ್ಯೆಗೆ ಕೈಗನ್ನಡಿಯಾಗಿದೆ. ಫೆ.1ರಂದು 392 ಮಂದಿಗೆ, ಫೆ.2ರಂದು 413 ಮಂದಿಗೆ ಈ ನಿಟ್ಟಿನಲ್ಲಿ ಕೇಸು ದಾಖಲಿಸಲಾಗಿದೆ. ಕೋವಿಡ್ ನಿಯಂತ್ರಣ ಉಲ್ಲಂಘಿಸಿದ ಆರೋಪದಲ್ಲಿ 879 ಮಂದಿ ವಿರುದ್ಧ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೇಸು ದಾಖಲಾಗಿದೆ.
ಕೋವಿಡ್ ಸಂಹಿತೆಗಳನ್ನು ಉಲ್ಲಂಘಿಸಿ ಅಲೆದಾಡಕೂಡದು. ಇನ್ನು ಮುಂದೆಯೂ ಜಾಗರೂಕತೆಯ ಸಹಿತ ವ್ಯವಹರಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಜಾಗ್ರತೆ ಪಾಲಿಸಬೇಕು.