ಬೆಂಗಳೂರು: ಗಡಿಗಳಲ್ಲಿ ಕೋವಿಡ್ ಪರೀಕ್ಷೆಯಿಂದ ತಾತ್ಕಾಲಿಕ ವಿನಾಯಿತಿ ನೀಡಿ ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ಮೂರು ದಿನಗಳಿಂದ ಗಡಿನಾಡಿನ ಜನರ ಸಮಸ್ಯೆಗೆ ಕೊನೆಗೂ ಒಂದು ಹಂತದ ಸಮಧಾನ ಉಂಟಾಗಿದೆ. ನಿತ್ಯ ಸಂಚರಿಸುವವರಿಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಕೆಲಸಕ್ಕೆ ತೆರಳುವವರಿಗೆ ಅವರ ಸ್ಥಳಗಳಲ್ಲಿ ಕೋವಿಡ್ ಪರೀಕ್ಷೆಗೆ ವ್ಯವಸ್ಥೆ ಮಾಡಿಕೊಡಲಾಗುವುದೆಂದು ತಿಳಿದುಬಂದಿದೆ. ಇದರಿಂದಾಗಿ ಪರೀಕ್ಷೆ ನಡೆಸುವವರಿಗೆ ಸಹಕಾರಿಯಾಗಲಿದೆ. ಇಷ್ಟಾಗಿಯೂ ಪರೀಕ್ಷೆ ನಡೆಸದೇ ಇದ್ದಲ್ಲಿ ಅಂತಹವರ ಸಂಚಾರಕ್ಕೆ ನಿಬಂಧಧ ಹೇರುವುದಾಗಿ ತಿಳಿದುಬಂದಿದೆ.
ಜೊತೆಗೆ, ಈ ವ್ಯವಸ್ಥೆ ಪರಿಪೂರ್ಣವಾಗಿ ಜಾರಿಗೊಂಡ ಬಳಿಕ ನಿಯಮವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ಸದ್ಯ ಕೋವಿಡ್ ನೆಗೆಟಿವ್ ಕಡ್ಡಾಯದಿಂದ ವಿನಾಯಿತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಮಾಹಿತಿ ನೀಡಿದ್ದಾರೆ.
ಇಂದು ಬೆಂಗಳೂರಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ್ದ ಕರ್ನಾಟಕ ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು, ಕೋವಿಡ್ ವಿಕೋಪ ಸ್ಥಿತಿಯನ್ನು ಗಮನಿಸಿ ನಿಬಂಧನೆಗಳನ್ನು ಹೇರಲು ಚಿಂತಿಸಲಾಯಿತು. ಆದರೆ ಗಡಿನಾಡಿಗರಿಗೆ ಬರಬಾರದೆಂಬ ನಿಬಂಧನೆ ಹೇರಿರಲಿಲ್ಲ. ಕೋವಿಡ್ ಪರೀಕ್ಷೆಗಳನ್ನು ನಡೆಸಿ ಬರಬಹುದೆಂದಷ್ಟೇ ಹೇಳಲಾಗಿತ್ತು. ಆದರೆ ಜನರು ಗೊಂದಲಕ್ಕೊಳಗಾಗಿ ವಿಕೋಪ ಸ್ಥಿತಿ ನಿರ್ಮಾಣವಾಯಿತು. ಎಲ್ಲರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ಇಂತಹ ನಿರ್ಣಯಕ್ಕೆ ಬಂದಿದೆ. ಯಾರ ಮೇಲೂ ಒತ್ತಡ ಹೇರಲಾಗದು. ನಿತ್ಯ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ಹೊರತು ಪಡಿಸಲಾಗಿದೆ ಎಂದು ತಿಳಿಸಿದರು.
ಗೊಂದಲ ಯಾಕಾಯಿತು:
ಕರ್ನಾಟಕ ಸೋಮವಾರದಿಂದ ಅಂತರ್ ರಾಜ್ಯ ಗಡಿಗಳಲ್ಲಿ ಕಟ್ಟುನಿಟ್ಟಿನ ನಿಬಂಧನೆಯನ್ನು ಸಮರೋಪಾದಿಯಲ್ಲಿ ಕೈಗೊಂಡಿರುವುದು ಹೌದು. ಹಾಗಿದ್ದಲ್ಲಿ ಇದರ ಹಿಂದೆ ಯಾವ ಉದ್ದೇಶವಿತ್ತೆಂಬುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ರಾಜ್ಯವೊಂದು ಏಕಾಏಕಿ ಹೊರ ರಾಜ್ಯಕ್ಕೆ ನಿಬಂಧನೆ ಹೇರಿರುವುದು ಗಡಿ ಪ್ರದೇಶಗಳ ಜನರ ಆಕ್ರೋಶಕ್ಕೆ ಕಾರಣವಾಯಿತು. ಮಹಾರಾಷ್ಟ್ರ, ಕೇರಳಗಳಲ್ಲಿ ಅತ್ಯಧಿಕ ಕೋವಿಡ್ ಬಾಧಿತರಿದ್ದಾಗಲೂ ಆ ರಾಜ್ಯಗಳ ಒಳ ಬರಲು ನಿಬಂಧನೆ ವಿಧಿಸಿಲ್ಲ ಎಂಬುದೂ ಇಲ್ಲಿ ಉಲ್ಲೇಖಾರ್ಹ.
ಕಾಸರಗೋಡಿನ ಡೊಂಬರಾಟ:
ಗಡಿನಾಡು ಕಾಸರಗೋಡು ದಕ್ಷಿಣ ಕನ್ನಡವನ್ನು ಬಹುತೇಕ ಆಶ್ರಯಿಸಿರುವ ಜಿಲ್ಲೆಯಾಗಿರುವುದರಿಂದ ಅಂತರ್ ರಾಜ್ಯ ನಿಯಂತ್ರಣಗಳು ಜನಸಾಮಾನ್ಯರ ಒಟ್ಟು ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸೋಮವಾರದಿಂದ ಕರ್ನಾಟಕ ನಿಬಂಧನೆ ಹೇರುತ್ತದೆ ಎಂಬ ವರದಿಗಳು ಹೊರಬರುತ್ತಿರುವಂತೆ ಯಾವ ರಾಜಕೀಯ ಪಕ್ಷಗಳೂ ಗಂಭೀರವಾಗಿ ಪರಿಗಣಿಸದೆ, ಸೋಮವಾರ ಏಕಾಏಕಿ ಪ್ರತಿಭಟನೆಗಿಳಿಯಿತು. ಆದರೆ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಪಕ್ಷವಾಗಿರುವುದರಿಂದ ಕೇರಳ ಅಥವಾ ಕಾಸರಗೋಡಿನ ಬಿಜೆಪಿಯಿಂದ ಯಾವ ಕ್ರಮಗಳೂ ನಡೆಯದಿರುವುದು ಊಹಾಪೋಪಗಳಿಗೆ ಕಾರಣವಾಗಿತ್ತು. ಈ ಮಧ್ಯೆ ಮಂಗಳವಾರ ಕೆಲವೆಡೆ ಬಿಜೆಪಿ ಪ್ರತಿಭಟನೆ ನಡೆಸಿತು. ಭಾನುವಾರ ಕಾಸರಗೋಡಲ್ಲಿ ಆಯೋಜನೆಗೊಂಡಿದ್ದ ಬಿಜೆಪಿ ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕರ್ನಾಟಕದ ಬಿಜೆಪಿ ನಾಯಕರು, ಶಾಸಕರು ಪಾಲ್ಗೊಂಡಿದ್ದರೂ ಆ ವೇಳೆ ಸಮಸ್ಯೆಯ ಉಲ್ಲೇಖವಾಗದಿರುವುದು ಜನಾಕ್ರೋಶಕ್ಕೆ ಎಡೆಮಾಡಿತ್ತು.
ಕಾಂಗ್ರೆಸ್ಸ್ ಮತ್ತು ಎಡರಂಗಗಳೂ ಅಧಿಕಾರಿ ಮಟ್ಟದಲ್ಲಿ ಯಾವ ಕ್ರಮಗಳಿಗೂ ಮುಂದಾಗಿಲ್ಲ. ಕಾಂಗ್ರೆಸ್ಸ್ ಪಕ್ಷದ ಕಡೆಯಿಂದ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರೂ ಅದು ಪಕ್ಕನೆ ಇತ್ಯರ್ಥವಾಗುವ ಸಾಧ್ಯತೆ ಇಲ್ಲವೆಂದು ಗೊತ್ತಿದ್ದರೂ ಅಂತಹದೊಂದು ಪ್ರಹಸನ ಯಾಕೆಂದು ಜನಸಾಮಾನ್ಯರಿಗೆ ತಿಳಿಯದಾಗಿದೆ.
ಅಂತೂ ಇದೀಗ ಒಂದು ಹಂತದ ರಿಲ್ಯಾಕ್ಸ್ ಗಡಿ ನಾಡಿನವರಿಗೆ ಲಭ್ಯವಾಗಿದ್ದು ಮುಂದೇನು ಎಂದು ಕಾದುನೋಡಬೇಕಿದೆ.