ಪಣಜಿ: ಅಲೋಪತಿ ವೈದ್ಯಪದ್ಧತಿಯನ್ನು ಬೆಂಬಲಿಸುವ ಆಲೋಚನೆಯಿಂದಲೇ ಆಯುರ್ವೇದ ವೈದ್ಯರಿಗೆ ಶಸ್ತ್ರಚಕಿತ್ಸೆ ನಡೆಸಲು ತರಬೇತಿ ನೀಡಲಾಗುತ್ತಿದೆ ಎಂದು ಹೇಳುವ ಮೂಲಕ ಕೇಂದ್ರ ಆಯುಷ್ ಸಚಿವ ಶ್ರೀಪಾದ್ ನಾಯಕ್ ಅವರು, ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡುವ ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡರು.
ಕಾರು ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಚಿವರು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮುನ್ನ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು.
ಆಯುರ್ವೇದ ವೈದ್ಯರಿಗೆ ಶಸ್ತ್ರಚಿಕಿತ್ಸೆ ನಡೆಸಲು ಅನುಮತಿ ನೀಡುವ ಕೇಂದ್ರದ ನಿರ್ಧಾರವನ್ನು ವಿರೋಧಿಸುವ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಪ್ರಶ್ನೆಗೆ ನಾಯಕ್, 'ಅಲೋಪತಿಯ ಒಂದು ವಿಭಾಗದ ವೈದ್ಯರು ಹೇಳುವಂತೆ ಮಿಕ್ಸೊಪತಿ ಎಂಬ ಪರಿಕಲ್ಪನೆ ಇಲ್ಲ' ಎಂದು ಸಚಿವರು ಹೇಳಿದರು.
'ಅಲೋಪತಿ ಅಭ್ಯಾಸವನ್ನು ಬೆಂಬಲಿಸುವುದಕ್ಕಾಗಿ ಭಾರತೀಯ ವೈದ್ಯಕೀಯ ಪದ್ಧತಿಯನ್ನು ಪರಿಚಯಿಸಲಾಗುತ್ತಿದೆ' ಎಂದು ಹೇಳಿದ ಸಚಿವರು, 'ಈ ವೈದ್ಯಕೀಯ ಪದ್ಧತಿಗಳು ಒಂದಕ್ಕೊಂದು ಪೂರಕವೇ ಹೊರತು, ಪೈಪೋಟಿಗಾಗಿ ಅಲ್ಲ' ಎಂದು ಹೇಳಿದರು.
'ಆಯುರ್ವೇದ ವೈದ್ಯರಿಗೆ ಅಲೋಪತಿ ವೈದ್ಯರಿಗೆ ನೀಡುವಂತಹ ಶಿಕ್ಷಣವನ್ನೇ ನೀಡುತ್ತಿದ್ದು, ಶಸ್ತ್ರಚಿಕಿತ್ಸೆ ನಡೆಸಲೂ ತರಬೇತಿ ನೀಡಲಾಗುತ್ತದೆ' ಎಂದು ನಾಯಕ್ ಹೇಳಿದರು.
'ಆಯುರ್ವೇದ ವೈದ್ಯರು ತಮ್ಮ ವೈದ್ಯಕೀಯ ಪದವಿಯನ್ನು ಪೂರ್ಣಗೊಳಿಸಿದ ನಂತರ, ಒಂದು ವರ್ಷ ಇಂಟರ್ನ್‌ಶಿಪ್‌ಗೆ ಸೇರುತ್ತಾರೆ. ಇವರೆಲ್ಲ ತರಬೇತಿ ಪಡೆದ ಶಸ್ತ್ರಚಿಕಿತ್ಸಕರು ಎಂದು ಅವರು ಪ್ರತಿಪಾದಿಸಿದರು.