ನವದೆಹಲಿ: ದೇಶದಲ್ಲಿ 34 ದಿನಗಳ ಅವಧಿಯಲ್ಲಿ ಒಂದು ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡಲಾಗಿದೆ. ಅತಿ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ಎರಡನೇ ರಾಷ್ಟ್ರ ಭಾರತವಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಅಮೆರಿಕವು 31 ದಿನಗಳಲ್ಲಿ 1 ಕೋಟಿ ಜನರಿಗೆ ಲಸಿಕೆ ನೀಡಿದ್ದರೆ ಬ್ರಿಟನ್ 56 ದಿನಗಳನ್ನು ತೆಗೆದುಕೊಂಡಿದೆ.
ಶುಕ್ರವಾರ ಬೆಳಿಗ್ಗೆ 8 ಗಂಟೆವರೆಗಿನ ಲೆಕ್ಕಾಚಾರದ ಪ್ರಕಾರ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಒಟ್ಟು 1,01,88,007 ಡೋಸ್ ಲಸಿಕೆ ನೀಡಲಾಗಿದೆ. ಇದರಲ್ಲಿ 62,60,242 ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್, 6,10,899 ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ಹಾಗೂ 33,16,866 ಮುಂಚೂಣಿ ಕಾರ್ಯಕರ್ತರಿಗೆ ಮೊದಲೇ ಡೋಸ್ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಮೊದಲ ಹಂತದ ಡೋಸ್ ಪಡೆದ ಆರೋಗ್ಯ ಕಾರ್ಯಕರ್ತರಿಗೆ ಎರಡನೇ ಡೋಸ್ ನೀಡಿಕೆಯನ್ನು ಫೆಬ್ರುವರಿ 13ರಿಂದ ಆರಂಭಿಸಲಾಗಿದೆ.
ಲಸಿಕೆ ನೀಡಿಕೆ ವಿಚಾರದಲ್ಲಿ ದೇಶವು ದಿನದಿಂದ ದಿನಕ್ಕೆ ಪ್ರಗತಿ ಕಾಣುತ್ತಿದೆ ಎಂದೂ ಸಚಿವಾಲಯ ಹೇಳಿದೆ.