ತಿರುವನಂತಪುರ: ಕೆ ಸುಧಾಕರನ್ ಅವರನ್ನು ಶೀಘ್ರದಲ್ಲೇ ಕೆಪಿಸಿಸಿ ಅಧ್ಯಕ್ಷರನ್ನಾಗಿ ಘೋಷಿಸುವ ಸೂಚನೆಗಳಿವೆ. ಚುನಾವಣೆ ಘೋಷಣೆಯ ಮೊದಲು ಸುಧಾಕರನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರುವ ಕ್ರಮ ಆರಂಭಗೊಂಡಿದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿದೆ ಎಂಬ ಸೂಚನೆಗಳಿವೆ.
ಹಾಲಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳಿದ್ದು, ಅದಕ್ಕಿಂತಲೂ ಮೊದಲು ಸುಧಾಕರನ್ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ತರಲಾಗುವುದು. ಈ ಹಿಂದೆ ಸುಧಾಕರನ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕಾರ್ಯಕರ್ತರು ಬೇಡಿಕೆ ಇರಿಸಿದ್ದರು. ಆದರೆ ಆ ಸಮಯದಲ್ಲಿ ಗುಂಪಗಾರಿಕೆ, ಕೆಲವು ನಾಯಕರ ಹಸ್ತಕ್ಷೇಪದಿಂದ ಮತ್ತು ಹೈಕಮಾಂಡ್‍ನ ಮತ್ತೊಬ್ಬ ಪ್ರಭಾವಿ ನಾಯಕನಿಂದ ಅದು ಈಡೇರಲಿಲ್ಲ.
ರಾಜ್ಯದಲ್ಲಿ ಹೈಕಮಾಂಡ್ ನಡೆಸಿದ ಸಮೀಕ್ಷೆ ಮತ್ತು ರಾಹುಲ್ ಗಾಂಧಿಯವರ ಭೇಟಿಯ ಸಮಯದಲ್ಲಿ ಅವರ ನೇರ ವಿಚಾರಣೆಗಳು ಅಧ್ಯಕ್ಷ ಸ್ಥಾನವನ್ನು ಸುಧಾಕರನ್ ಅವರಿಗೆ ಹಸ್ತಾಂತರಿಸುವ ನಿರ್ಧಾರಕ್ಕೆ ಕಾರಣವಾಯಿತು.
ರಮೇಶ್ ಚೆನ್ನಿತ್ತಲ ನಡೆಸಿದ ಉಪವಾಸ ಮತ್ತು ನಾಮನಿರ್ದೇಶನ ಸಮಿತಿ ಸಭೆಗಾಗಿ ನಿನ್ನೆ ತಿರುವನಂತಪುರಕ್ಕೆ ಆಗಮಿಸಿದ್ದ ಸುಧಾಕರನ್, ರಾತ್ರಿ ಮರಳಲು ನಿರ್ಧರಿಸಿದ್ದರು. ಆದರೆ ಇಂದು ಪ್ರಕಟಣೆ ಹೊರಬೀಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಪ್ರಯಾಣ ಮೊಟಕುಗೊಳಿಸಿದರೆಂದು ತಿಳಿಯಲಾಗಿದೆ. ಮುಲ್ಲಪ್ಪಳ್ಳಿ ರಾಮಚಂದ್ರನ್ ಈ ಬಾರಿ ಉತ್ತರ ಕೇರಳದಿಂದ ಸ್ಪರ್ಧಿಸುವ ನಿರೀಕ್ಷೆಯಿದೆ. ಮುಲ್ಲಪ್ಪಳ್ಳಿ ಕೊಯಿಲಾಂಡಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಸೂಚನೆಗಳಿವೆ.