ನವದೆಹಲಿ: ಕೋವಿಡ್-19 ಸಂದರ್ಭದಲ್ಲಿ ಪಿಎಂ ಕೇರ್ಸ್ ಗೆ ನೀಡಲಾಗಿದ್ದ ಸಂಸದರಿಗೆ ನೀಡಲಾಗುವ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿ ಲ್ಯಾಡ್) ಹಣವನ್ನು ವಾಪಸ್ ನೀಡಲು ನಿರ್ದೇಶನ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಫೆ.16 ರಂದು ವಜಾಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಬೋಬ್ಡೆ ಹಾಗೂ ನ್ಯಾ. ಎಎಸ್ ಬೋಪಣ್ಣ ಹಾಗೂ ವಿ ರಾಮಸುಬ್ರಹ್ಮಣಿಯನ್ ಅವರಿದ್ದ ಪೀಠ ತುಷಾರ್ ಗುಪ್ತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿತು.
ತುಷಾರ್ ಗುಪ್ತ ಪರ ವಾದ ಮಂಡಿಸಿದ ಅಡ್ವೊಕೇಟ್ ದುಷ್ಯಂತ್ ತಿವಾರಿ, ಸಂಸದರಿಗೆ ನೀಡಲಾಗುವ ಎಂಪಿ ಲ್ಯಾಡ್ ನಿಧಿಯಿಂದ ಕೊರೋನಾ ತುರ್ತು ಪರಿಸ್ಥಿತಿಯನ್ನು ನಿಭಾಯಿಸುವುದಕ್ಕಾಗಿ ಪಿಎಂ ಕೇರ್ಸ್ ಗೆ 365 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಈ ಹಣವನ್ನು ಪುನಃ ಎಂಪಿ ಲ್ಯಾಡ್ ಖಾತೆಗಳಿಗೇ ಹಾಕಲು ನಿರ್ದೇಶನ ನೀಡಬೇಕೆಂದು ಮನವಿ ಮಾಡಿದ್ದರು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಎಂಪಿ ಲ್ಯಾಡ್ ಖಾತೆಗಳಿಂದ ಪಿಎಂ ಕೇರ್ಸ್ ಗೆ ಹಣ ಹಾಕಲಾಗಿತ್ತು. ಇದರಿಂದ ಸ್ಥಳೀಯ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯುಂಟಾಗಿದೆ.
ತಿವಾರಿ ತಮ್ಮ ವಾದ ಮಂಡನೆಗೆ ಆರ್ ಟಿಐ ದಾಖಲೆಗಳನ್ನು ಬಳಸಿಕೊಂಡಿದ್ದರು. 339 ಸಂಸದರು ಈ ವರೆಗೂ 365 ಕೋಟಿ ರೂಪಾಯಿಗಳನ್ನು ಎಂಪಿ ಲ್ಯಾಡ್ ಖಾತೆಯಿಂದ ಪಿಎಂ ಕೇರ್ಸ್ ಗೆ ನೀಡಿದ್ದಾರೆ. ಅಷ್ಟೇ ಅಲ್ಲದೇ 2020 ರ ಏಪ್ರಿಲ್ ತಿಂಗಳಲ್ಲಿ ಎಂಪಿ ಲ್ಯಾಡ್ಸ್ ನಿಧಿಯನ್ನು 2020-21, 2021-2022 ಅವಧಿಗೆ ಅಮಾನತುಗೊಳಿಸಲಾಗಿದೆ.