ಮಂಜೇಶ್ವರ : ಕರೋನ ಬಾಧೆಯಿಂದ ಜನತೆ ತತ್ತರಿಸುತ್ತಿರುವ ಈ ಸಮಯದಲ್ಲಿ ಕಳೆದ ಒಂದು ವರ್ಷದಿಂದ ಮಕ್ಕಳ ಒಡನಾಟವಿಲ್ಲದೆ ಮಂಕಾಗಿದ್ದ ಶಾಲೆಯು ಇದೀಗ ಶಾಲಾ ವಾರ್ಷಿಕೋತ್ಸವ ನಡೆಸುವ ಮೂಲಕ ಗಮನ ಸೆಳೆದಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಹೌದು, ಶಿಕ್ಷಣ ಕೇಂದ್ರವು ಕಳೆದ ಒಂದು ವರ್ಷದಿಂದ ಕೊರೋನ ಸಂಕಷ್ಟದಿಂದ ಮಕ್ಕಳ ಚಟುವಟಿಕೆಗಳಿಲ್ಲದೆ ಮುಚ್ಚಿದ್ದು ಶಾಲೆಯು ಮಕ್ಕಳ ಓಡಾಟವಿಲ್ಲದೆ ಬಣಗುಟ್ಟುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿ ಬಂದಿರುವುದು ಇತಿಹಾಸದಲ್ಲೇ ಮೊದಲು. ಅದೆಷ್ಟೋ ಕಾರ್ಯಕ್ರಮಗಳು ಮಕ್ಕಳ ಸಂಭ್ರಮ ಸಡಗರದಿಂದ ಮರೆ ಮಾಚಿದಂತಾಗಿ ಔಪಚಾರಿಕವಾಗಿ ನಡೆಸಲ್ಪಟ್ಟಿದೆ.
ಆದರೆ ಇಲ್ಲೊಂದು ಶಾಲೆಯು ಇರುವಂತಹ ಎಲ್ಲಾ ಅಡೆತಡೆಗಳನ್ನು ಮೆಟ್ಟಿ ನಿಂತು ಪ್ರತಿ ವರ್ಷ ಊರಿನ ಜಾತ್ರೆಯಂತೆ ಆಚರಿಸಲ್ಪಡುತ್ತಿದ್ದ ಶಾಲಾ ವಾರ್ಷಿಕೋತ್ಸವವನ್ನು ಈ ಸಲವೂ ನಡೆಸಲು ತಯಾರಿ ನಡೆಸುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರತಿ ವರ್ಷ ಶಾಲಾ ರಕ್ಷಕ-ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಹಾಗೂ ಊರವರ ನೆರವಿನಿಂದ ಸಂಭ್ರಮ ಸಡಗರದಿಂದ ನಡೆಸುತ್ತಿದ್ದ ಶಾಲಾ ವಾರ್ಷಿಕೋತ್ಸವವು ಈ ಸಲವೂ ನಡೆಯಬೇಕು ಎಂಬ ಉದ್ದೇಶದಿಂದ 'ಚಿಣ್ಣರ ಉತ್ಸವ 2020-21' ಎಂಬ ವಿಶೇಷ ಶಾಲಾ ವಾರ್ಷಿಕೋತ್ಸವವನ್ನು ನಡೆಸುವ ಮೂಲಕ ಗಮನ ಸೆಳೆಯುತ್ತಿದೆ. ಕೋವಿಡ್ ಹರಡುವಿಕೆಯ ನಿಯಂತ್ರಣಕ್ಕೆ ಸರ್ಕಾರವು ಈಗಾಗಲೇ ಆನ್ ಲೈನ್ ಶಿಕ್ಷಣಕ್ಕೆ ಮೊರೆ ಹೋಗಿದ್ದು, ಅದೇ ರೀತಿ ಕೋವಿಡ್ ಮಾನದಂಡಗಳನ್ನು ಅನುಸರಿಸಿಕೊಂಡು ಈ ವರ್ಷ ಶಾಲಾ ವಾರ್ಷಿಕೋತ್ಸವವನ್ನು ಆನ್ ಲೈನ್ ಮೂಲಕ ನಡೆಸುವ ತೀರ್ಮಾನಕ್ಕೆ ಬಂದು ಅದರ ಪ್ರಕ್ರಿಯೆಯಲ್ಲಿ ಶಾಲಾ ಸಿಬಂದಿ ವರ್ಗ ಕಾರ್ಯಾಚರಿಸುತ್ತಿರುವರು.
ಪ್ರತಿ ವರ್ಷದಂತೆ ಈ ಸಲದ ಕಾರ್ಯಕ್ರಮದಲ್ಲಿಯೂ ಗಣ್ಯರ ಶುಭ ಹಾರೈಕೆಯೊಂದಿಗೆ ಮೀಂಜ ಪಂಚಾಯತ್ ಅಧ್ಯಕ್ಷರು ಉದ್ಘಾಟಿಸಲಿದ್ದು ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳೂ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳು 'ನಮ್ಮ ಕುಳೂರು' ಎಂಬ ಯೂಟ್ಯೂಬ್ ಚಾನಲಿನಲ್ಲಿ ಇದೇ ಶುಕ್ರವಾರದಂದು ಪ್ರಸಾರಗೊಳ್ಳಲಿದೆ.