ನವದೆಹಲಿ: ತನ್ನ ಜಾಮೀನು ರದ್ದುಗೊಳಿಸುವಂತೆ ಜಾರಿ ನಿರ್ದೇಶನಾಲಯ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿರುವ ಬೆನ್ನಿಗೇ ಇದಕ್ಕೆ ತಡೆಯಾಜ್ಞೆ ನೀಡಲು ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರು ಸುಪ್ರೀಂ ಕೋರ್ಟ್ ನ್ನು ಸಂಪರ್ಕಿಸಿದ್ದಾರೆ. ಈ ನಿಟ್ಟಿನಲ್ಲಿ ಶುಕ್ರವಾರವೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ. ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂ.ಶಿವಶಂಕರ್ ಗೆ ನೀಡಲಾದ ಜಾಮೀನು ರದ್ದುಗೊಳಿಸುವಂತೆ ಕೋರಿ ಗುರುವಾರ ಬೆಳಿಗ್ಗೆ ಇ.ಡಿ ಸುಪ್ರೀಂ ಕೋರ್ಟ್ ಸಂಪರ್ಕಿಸಿತ್ತು. ಆ ಬಳಿಕ ಶಿವಶಂಕರ್ ತಡೆಯಾಜ್ಞೆಗೆ ಮನವಿ ಸಲ್ಲಿಸಿದರು.
ಇ.ಡಿ ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಮೊದಲು ತಮ್ಮ ವಾದಗಳನ್ನು ಆಲಿಸುವಂತೆ ಶಿವಶಂಕರ್ ನ್ಯಾಯಾಲಯವನ್ನು ಕೋರಿದ್ದಾರೆ. ಆರೋಗ್ಯ ಕಾರಣಕ್ಕಾಗಿ ಶಿವಶಂಕರ್ ಅವರಿಗೆ ಮೇ 25 ರಂದು ಹೈಕೋರ್ಟ್ ಜಾಮೀನು ನೀಡಿತ್ತು.
ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಕೋರಿ ಇಡಿಯ ಕೊಚ್ಚಿ ವಲಯ ಕಚೇರಿಯ ಸಹಾಯಕ ನಿರ್ದೇಶಕರು ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ಪ್ರಕಾರ, ಶಿವಶಂಕರ್ ಅವರಿಗೆ ನೀಡಿರುವ ಜಾಮೀನಿನಿಂದ ಪ್ರಕರಣದ ತನಿಖೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ತಿರುವನಂತಪುರದ ಎಸ್.ಬಿ.ಐ. ಶಾಖೆಯ ಲಾಕರ್‍ನಲ್ಲಿ ಪತ್ತೆಯಾದ ಲೆಕ್ಕವಿಲ್ಲದ 64 ಲಕ್ಷ ರೂ.ಗಳ ತನಿಖೆ ಗಂಭೀರ ಹಂತದಲ್ಲಿದೆ. ಶಿವಶಂಕರ್ ವಿರುದ್ಧ ಬಲವಾದ ಪುರಾವೆಗಳೂ ಇವೆ. ಅವರು ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ, ಇದು ಪ್ರಕರಣದ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಇ.ಡಿ. ವಾದಿಸುತ್ತಿದೆ.