ನವದೆಹಲಿ: ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ನಿನ್ನೆ ಹೇಳಿದೆ.
``ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕ್ರಮವಾಗಿ 61,550 ಹಾಗೂ 37,383 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಪೈಕಿ ಶೇ 72ರಷ್ಟು ಪ್ರಕರಣಗಳು ಈ ಎರಡು ರಾಜ್ಯಗಳಲ್ಲಿವೆ,'' ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.
ಕಳೆದ ಏಳು ದಿನಗಳ ಅವಧಿಯಲ್ಲಿ ಪ್ರತಿ 10 ಲಕ್ಷ ಜನಸಂಖ್ಯೆಗೆ 56 ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದ್ದಾರೆ.
ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ಆರಂಭಗೊಂಡಂದಿನಿಂದ ಹಿಡಿದು ಮಂಗಳವಾರ ಅಪರಾಹ್ನ 1 ಗಂಟೆ ತನಕ 87,40,595 ಮಂದಿಗೆ ಲಸಿಕೆ ನೀಡಲಾಗಿದೆ. ಇವರ ಪೈಕಿ 85,69,917 ಮಂದಿಗೆ ಮೊದಲ ಡೋಸ್ ನೀಡಲಾಗಿದೆ ಹಾಗೂ 1,70,678 ಮಂದಿಗೆ ಎರಡನೇ ಡೋಸ್ ನೀಡಲಾಗಿದೆ ಎಂದು ಅವರು ಹೇಳಿದರು.
ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆಯಲು ನೋಂದಣಿಗೊಂಡಿದ್ದ ಶೇ 70ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು ರಾಜಸ್ಥಾನ, ಸಿಕ್ಕಿಂ, ಜಾರ್ಖಂಡ್, ಮಿಝೋರಾಂ, ಕೇರಳ, ಉತ್ತರ ಪ್ರದೇಶ, ಒಡಿಶಾ, ಹಿಮಾಚಲ ಪ್ರದೇಶ, ತ್ರಿಪುರಾ, ಬಿಹಾರ, ಛತ್ತೀಸ್ಗಢ, ಮಧ್ಯ ಪ್ರದೇಶ, ಉತ್ತರಾಖಂಡ, ಲಕ್ಷದ್ವೀಪ ಮತ್ತು ತ್ರಿಪುರಾದಲ್ಲಿ ಲಸಿಕೆ ಪಡೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಎರಡನೇ ಡೋಸ್ ಅನ್ನು ಶೇ. 60ಕ್ಕೂ ಅಧಿಕ ಅರ್ಹ ಆರೋಗ್ಯ ಕಾರ್ಯಕರ್ತರಿಗೆ ಲಡಾಖ್, ಜಾರ್ಖಂಡ್, ಅಸ್ಸಾಂ, ಉತ್ತರ ಪ್ರದೇಶ, ತೆಲಂಗಾಣ, ತ್ರಿಪುರಾ, ಗುಜರಾತ್ ಮತ್ತು ಗೋವಾ ರಾಜ್ಯಗಳಲ್ಲಿ ಇಲ್ಲಿಯ ತನಕ ನೀಡಲಾಗಿದೆ.