ಮುಳ್ಳೇರಿಯ: ಏಕಲವ್ಯ ಕ್ರೀಡಾ ಮಾದರಿ ವಸತಿ ಶಾಲೆಯ ನಿರ್ಮಾಣಕ್ಕೆ ಚಾಲನೆ ಭಾನುವಾರ ನಡೆದಿದೆ. ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ ಕೊಯಿತ್ತಟ್ಟದಲ್ಲಿ ಈ ಕಟ್ಟಡ ನಿರ್ಮಾಣಗೊಳ್ಳಲಿದೆ.
ಕೊಯಿತಟ್ಟ ಕುಟುಂಬಶ್ರೀ ಸಭಾಂಗಣದಲ್ಲಿ ಜರಗಿದ ಸಮಾರಂಭದಲ್ಲಿ ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಸಚಿವ ಎ.ಕೆ.ಬಾಲನ್ ಆನ್ ಲೈನ್ ಮೂಲಕ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಪರಿಶಿಷ್ಟ ಜನಾಂಗಗಳ ವಿದ್ಯಾರ್ಥಿಗಳು ಕ್ರೀಡಾ ವಲಯದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ಉದ್ದೇಶದಿಂದ ರಾಜ್ಯ ಸರ್ಕಾರ ಈ ಯೋಜನೆ ಜಾರಿಗೊಳಿಸುತ್ತಿದೆ. 25 ಕೋಟಿ ರೂ. ವೆಚ್ಚದಲ್ಲಿ ನಡೆಯುವ ಯೋಜನೆಗೆ 13 ಕೋಟಿ ರೂ. ರಾಜ್ಯ ಸರ್ಕಾರ, 12 ಕೋಟಿ ರೂ. ಕೇಂದ್ರ ಸರ್ಕಾರ ಒದಗಿಸಲಿದೆ. ಕಂದಾಯ ಸಚಿವ ಇ.ಚಂದ್ರಶೇಖರನ್, ಮಾಜಿ ಸಂಸದ ಪಿ.ಕರುಣಾಕರನ್ ಅವರ ಸತತ ಯತ್ನದ ಫಲವಾಗಿ ಈ ಯೋಜನೆ ಜಾರಿಗೊಂಡಿದೆ ಎಂದು ತಿಳಿಸಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕಿನಾನೂರು-ಕರಿಂದಳಂ ಪಂಚಾಯತಿ ಅಧ್ಯಕ್ಷ ಟಿ.ಕೆ.ರವಿ, ಪರಪ್ಪ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಎಂ.ಲಕ್ಷ್ಮಿ, ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷೆ ಕೆ.ಶಕುಂತಲಾ ಮೊದಲಾದವರು ಉಪಸ್ಥಿತರಿದ್ದರು.