ಬೆಂಗಳೂರು: ಮಹಾರಾಷ್ಟ್ರ, ಕೇರಳ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಯಾವುದೇ ಬಸ್ ಗಳನ್ನು ನಿಬರ್ಂಧಿಸಿಲ್ಲ... ಆದರೆ ಪ್ರಯಾಣಿಕರ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಾಗಿರಬೇಕು ಎಂದು ಸಾರಿಗೆ ಸಚಿವ ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ನೆರೆ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, ಈ ಹಿನ್ನೆಲೆಯಲ್ಲಿ ಅಂತ್ ರಾಜ್ಯ ಬಸ್ ಸಂಚಾರದ (ಮಹಾರಾಷ್ಟ್ರ, ಕೇರಳ) ಕುರಿತು ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಪ್ರವೇಶಿಸುವ ಯಾವುದೇ ಬಸ್‍ಗಳನ್ನು ತಡೆಯುವಂತಿಲ್ಲ. ಆದರೆ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ತಮ್ಮೊಂದಿಗೆ ಕೊರೊನಾ ಪರೀಕ್ಷಾ ನೆಗೆಟಿವ್ ವರದಿ ತರುವುದು ಕಡ್ಡಾಯವಾಗಿದೆ. ಜೊತೆಗೆ ಪ್ರಯಾಣಿಕರು ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದೂ ಸವದಿ ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರ, ಕೇರಳದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಸೋಂಕು ಪ್ರಕರಣಗಳು ಏರಿಕೆಯಾದ ಹಿನ್ನೆಲೆಯಲ್ಲಿ ಈಚೆಗೆ ಕರ್ನಾಟಕ-ಕೇರಳ ಗಡಿ ಬಂದ್ ಮಾಡಿದ್ದ ಸಂಗತಿ ಆಕ್ಷೇಪಕ್ಕೆ ಕಾರಣವಾಗಿತ್ತು. ಗಡಿಗಳನ್ನು ಬಂದ್ ಮಾಡಿ, ವಾಹನಗಳಿಗೆ ನಿಬರ್ಂಧ ಹೇರಿರುವುದಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಕರ್ನಾಟಕ ಸರ್ಕಾರ ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸ್ವತಃ ಸಾರಿಗೆ ಸಚಿವರು ಸ್ಪಷ್ಟನೆ ನೀಡಿದ್ದರು.