ಮುಂಬೈ: ತೈಲ ಬೆಲೆ ಏರಿಕೆಗೆ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂಬುದನ್ನು ಪ್ರತಿಭಟಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾನುವಾರ ಇಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಕಪ್ಪುಬಾವುಟ ಪ್ರದರ್ಶಿಸಿದರು.
ಆದರೆ, ಸಚಿವೆ ಭಾಗವಹಿಸಿಸಬೇಕಿದ್ದ ಕಾರ್ಯಕ್ರಮದ ಸ್ಥಳವನ್ನು ಪ್ರತಿಭಟನಾಕಾರರು ತಲುಪದಂತೆ ಪೊಲೀಸರು ತಡೆದರು. ಇಲ್ಲಿನ ದಾದರ್‌ನಲ್ಲಿ ಬಜೆಟ್ ಕುರಿತು ಆಯೋಜಿಸಿದ್ದ ಸಂವಾದದಲ್ಲಿ ಭಾಗವಹಿಸಲು ಸಚಿವೆ ಬಂದಿದ್ದರು.
ದಾದರ್ ರೈಲ್ವೆ ನಿಲ್ದಾಣದ ಬಳಿ ಗುಂಪುಗೂಡಿದ್ದ ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ವಿರುದ್ಧ ಅವರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಪಿ ವಿಜಯ್ ಪಾಟೀಲ್ ಅವರು, ಪ್ರತಿಭಟನೆ ಶಾಂತಿಯುತವಾಗಿತ್ತು. ಯಾವುದೇ ಅಹಿತಕರ ಬೆಳವಣಿಗೆಗೆ ಆಸ್ಪದವಾಗಿಲ್ಲ ಎಂದು ಹೇಳಿದರು. ಮುಂಬೈ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನಾ ಕಾರ್ಯದರ್ಶಿ ಸನಾ ಖುರೇಷಿ ಅವರು, ಇಂಧನ ದರ ಏರಿಕೆಯಿಂದ ಜನಸಾಮಾನ್ಯರಿಗೆ ಹೊರೆ ಆಗಲಿದೆ ಎಂದರು.