ಲಡಾಖ್: ಗಡಿ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಮನೆ ಮಾಡಿದ್ದ ಪ್ರಕ್ಷುಬದ್ಧತೆ ಕೊನೆ ಹಂತಕ್ಕೆ ತಲುಪಿದ್ದು, ಶಾಂತಿ ಮಾತುಕತೆಯಂತೆ ಎರಡೂ ರಾಷ್ಟ್ರಗಳು ಗಡಿಯಿಂದ ಸೈನ್ಯವನ್ನು ಹಿಂತೆಗೆದುಕೊಳ್ಳಲಾರಂಭಿಸಿವೆ.
ಚೀನಾ ಮತ್ತು ಭಾರತದ ಸೈನಿಕರು ಮತ್ತು ಟ್ಯಾಂಕ್‌ಗಳು ಪೂರ್ವ ಲಡಾಖ್‌ನ ಪಾಂಗೊಂಗ್ ಸರೋವರದ ದಡದಿಂದ ಹಿಂದಕ್ಕೆ ತೆರಳುತ್ತಿರುವ ಚಿತ್ರಗಳನ್ನು ಮತ್ತು ಗಡಿ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ನಿರ್ಮಿತಿಗಳನ್ನು ತೆರವು ಮಾಡುತ್ತಿರುವ ದೃಶ್ಯಗಳನ್ನು ಭಾರತೀಯ ಸೇನೆ ಮಂಗಳವಾರ ಬಿಡುಗಡೆ ಮಾಡಿದೆ.
ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ವಾರವಾದರೂ ಬೇಕಾಗಬಹುದು ಎಂದು ಹೇಳಲಾಗಿದೆ. ಎರಡೂ ರಾಷ್ಟ್ರಗಳ ನಡುವಿನ ಈ ಪ್ರಕ್ರಿಯೆಯು ಕಳೆದ ಬುಧವಾರ (ಫೆ.10) ಆರಂಭವಾಗಿತ್ತು.
ಸೇನಾ ಮಾತುಕತೆಯ ಒಪ್ಪಂದದ ಭಾಗವಾಗಿ, ಚೀನಾ ಹಾಗೂ ಭಾರತೀಯ ಪಡೆಗಳು ಪ್ಯಾಂಗೊಂಗ್ ಸರೋವರ ಪ್ರದೇಶದಲ್ಲಿ ಏಕಕಾಲದಲ್ಲಿ ಮತ್ತು ವ್ಯವಸ್ಥಿತ ವಾಗಿ ಸೇನೆಯನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿವೆ ಎಂದು ವಿದೇಶಾಂಗ ಸಚಿವ ಜೈಶಂಕರ್ ತಿಳಿಸಿದ್ದರು.
9ನೇ ಸುತ್ತಿನ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಯ ಸಂದರ್ಭದಲ್ಲಿ ತಲುಪಿದ ಒಮ್ಮತದ ಪ್ರಕಾರ, ಚೀನಾ ಮತ್ತು ಭಾರತೀಯ ಗಡಿ ಪಡೆಗಳು ಹಿಂದಕ್ಕೆ ಸರಿಯಲು ಪ್ರಾರಂಭಿಸಿದವು ಎಂದು ಚೀನಾದ ರಕ್ಷಣಾ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮ ಗ್ಲೋಬಲ್ ಟೈಮ್ಸ್ ಇತ್ತೀಚೆಗೆ ವರದಿ ಮಾಡಿತ್ತು.