ಉಪ್ಪಳ : ಕೋಟೆಕಾರು ನೆಲ್ಲಿಸ್ಥಳ ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಯಕ್ಷಗಾನ ಗುರುಗಳಾದ ರಾಮಸಾಲ್ಯಾನ್ ಮಂಗಲ್ಪಾಡಿ ನಡೆಸಿಕೊಡುವ ತೆಂಕುತಿಟ್ಟು ಭಾಗವತಿಕೆ ಹಾಗೂ ನಾಟ್ಯತರಬೇತಿ ತರಗತಿಗಳನ್ನು ಇತ್ತಿಚೆಗೆ ನೆಲ್ಲಿಸ್ಥಳ ಶ್ರೀ ಕಾಳಿಕಾಂಬಾ ದೇವಸ್ಥಾನದ ಅಧ್ಯಕ್ಷ ಕೆ.ಸುಂದರ ಆಚಾರ್ಯ ನಡುಮನೆ ದೀಪಬೆಳಗಿಸಿ ಉದ್ಘಾಟಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಮಾತನಾಡಿ "ಯಕ್ಷಗಾನ ತರಬೇತಿಯಿಂದ ಆಸಕ್ತರಿಗೆ ಸಮಗ್ರ ಯಕ್ಷಗಾನವನ್ನು ಅಧ್ಯಯನ ಮಾಡುವ ಬಾಗಿಲು ತೆರೆದುಕೊಳ್ಳುತ್ತದೆ. ನಾಟ್ಯ, ಅರ್ಥಗಾರಿಕೆ, ಭಾಗವತಿಕೆ ಕಲಿಯುವ ಜೊತೆಯಲ್ಲಿ ಯಕ್ಷಗಾನ ನಡೆದುಬಂದ ದಾರಿ, ಯಕ್ಷಗಾನಕ್ಕೆ ಹಿರಿಯರ ಕೊಡುಗೆ, ಬಗ್ಗೆ ತಿಳಿದುಕೊಳ್ಳುತ್ತಾ ನಾವೇನು ಮಾಡಬೇಕು ಎನ್ನುವ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ. ಯಕ್ಷಗಾನದಲ್ಲಿ ಕುರುಡು ಅನುಕರಣೆಗಿಂತ ಸ್ವಂತಿಕೆಯನ್ನು ಆರಂಭದಿಂದಲೇ ಬೆಳೆಸಿಕೊಳ್ಳಬೇಕು. ಹೆಚ್ಚಿನ ಪರಿಶ್ರಮ, ಅಧ್ಯಯನ, ಶ್ರದ್ಧೆ ನಿಷ್ಠಯಿಂದ ಓರ್ವ ಉತ್ತಮ ಕಲಾವಿದ ರೂಪು ಕೊಳ್ಳಬಹುದು ಎಂದು ಅಭಿಪ್ರಾಯ ಪಟ್ಟರು.
ಯಕ್ಷಗಾನ ಗುರು ರಾಮಸಾಲ್ಯಾನ್ ಮಂಗಲ್ಪಾಡಿಯವರು ಕಲಿಕಾ ವಿದ್ಯಾರ್ಥಿಗಳಿಗೆ ಸಲಹೆ ಮಾರ್ಗದರ್ಶನ ನೀಡಿದರು.
ಉಚ್ಚಿಲದ ಕಲಾಗಂಗೋತ್ರಿ ಸಂಸ್ಥೆಯ ಹಿರಿಯ ಸದಸ್ಯ ಕೆ.ಸದಾಶಿವ, ಕಾಳಿಕಾಂಬ ಕ್ಷೇತ್ರದ ಪುರೋಹಿತ ರವಿಚಂದ್ರ ಆಚಾರ್ಯ, ನೆಲ್ಲಿಸ್ಥಳ ವಿಶ್ವಕರ್ಮ ಸೇವಾಸಂಘದ ಅಧ್ಯಕ್ಷ ಎಂ ಮಹೇಶ್ ಆಚಾರ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಉಮೇಶ್ ಸಾಲಿಯಾನ್ ನೆಲ್ಲಿಸ್ಥಳ ಪ್ರಾರ್ಥನೆ ಗೈದರು.ಬಿ ಕೇಶವ ಆಚಾರ್ಯ ನೆಲ್ಲಿಸ್ಥಳ ಕಾರ್ಯಕ್ರಮ ನಿರ್ವಹಿಸಿದರು.