HEALTH TIPS

ಚುನಾವಣೆ: ಚಿನ್ನ ಸಾಲ ಮನ್ನಾ, ಕೇಸ್‌ ವಾಪ್ಸಿ, ಮೀಸಲಾತಿ, ವೇತನ ಹೆಚ್ಚಳದ ವರೆಗೆ......!

          ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಹಾಗೂ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಮತದಾರರನ್ನು ಸೆಳೆಯಲು ರಾಜಕೀಯ ಪಕ್ಷಗಳು ಕಸರತ್ತುಗಳನ್ನು ನಡೆಸುತ್ತಿವೆ. ಚಿನ್ನದ ಸಾಲ ಮನ್ನಾದಿಂದ ತೊಡಗಿ ವಿವಿಧ ಯೋಜನೆಗಳ ಘೋಷಣೆ ಭರದಿಂದ ಸಾಗಿವೆ. ಇಂಥ ಕೆಲವು ನಿದರ್ಶನಗಳು ಇಲ್ಲಿವೆ.


                                 ತಮಿಳುನಾಡಿನಲ್ಲಿ ಚಿನ್ನದ ಸಾಲ ಮನ್ನಾ

          ಚುನಾವಣಾ ಆಯೋಗವು ವಿಧಾನಸಭೆ ಚುನಾವಣೆ ದಿನಾಂಕ ಘೋಷಿಸುವ ಕೆಲವೇ ಹೊತ್ತಿನ ಮೊದಲು ತಮಿಳುನಾಡು ಮುಖ್ಯಮಂತ್ರಿ ಇ.ಪಳನಿಸ್ವಾಮಿ ಅವರು ಚಿನ್ನದ ಸಾಲ ಮನ್ನಾ ಘೋಷಿಸಿದರು. 6 ಸವರಿನ್‌ ವರೆಗೆ ಚಿನ್ನ ಅಡವಿಟ್ಟು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯಲಾಗಿರುವ ಸಾಲ ಮನ್ನಾ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಕೋವಿಡ್-19 ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾಗಿರುವ ಬಡವರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಅವರು ಹೇಳಿದ್ದಾರೆ.

           ವನ್ನಿಯಾರ್‌ ಸಮುದಾಯಕ್ಕೆ ಶೇ 10.5 ಮೀಸಲಾತಿ ಕಲ್ಪಿಸುವ ಮಸೂದೆಯನ್ನು ತಮಿಳುನಾಡು ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಕ್ಕೂ ಕೆಲವೇ ಕ್ಷಣ ಮುನ್ನ ಅನುಮೋದಿಸಿದೆ.

ಪ್ರತಿಯೊಂದು ಕ್ಷೇತ್ರಕ್ಕೂ ಭೇಟಿ ನೀಡಿ ಕುಂದುಕೊರತೆಗಳನ್ನು ಸಂಗ್ರಹಿಸುವುದಾಗಿ ಪ್ರತಿಪಕ್ಷ ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್ ಈಗಾಗಲೇ ಹೇಳಿದ್ದಾರೆ. ಸರ್ಕಾರ ರಚಿಸಿದ ನೂರು ದಿನಗಳ ಒಳಗಾಗಿ ಪ್ರತಿಯೊಂದು ಕುಂದುಕೊರತೆಗಳನ್ನೂ ಪರಿಹರಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ. ಈ ಮಧ್ಯೆ, ಇದೇ ಕಾರ್ಯಕ್ಕಾಗಿ ಆಡಳಿತಾರೂಢ ಎಐಎಡಿಎಂಕೆಯು ಸಹಾಯವಾಣಿ ಆರಂಭಿಸಿದೆ.

                                ಪಶ್ಚಿಮ ಬಂಗಾಳದಲ್ಲಿ ಏನೇನು ಕೊಡುಗೆ?

      ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 'ಪಶ್ಚಿಮ ಬಂಗಾಳ ನಗರ ಉದ್ಯೋಗ ಯೋಜನೆ' ಅಡಿ ದಿನಗೂಲಿ ಕಾರ್ಮಿಕರ ಕೂಲಿ ಹೆಚ್ಚಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದರಿಂದ 56,600 ಕಾರ್ಮಿಕರಿಗೆ ಪ್ರಯೋಜನವಾಗಲಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.

ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೆ ಶೇ 33ರ ಮೀಸಲಾತಿ ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ.

        ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ಬಿಜೆಪಿ ಕೆಲಸ ಮಾಡಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಸಂಯೋಜಿತ ಮೀನುಗಾರಿಕಾ ವಲಯ ಸ್ಥಾಪಿಸುವುದಾಗಿಯೂ ಅವರು ಭರವಸೆ ನೀಡಿದ್ದಾರೆ.

                                       ಕೇರಳದಲ್ಲಿ ಪ್ರಕರಣಗಳ ವಾಪಸ್!!:

        ಸಿಎಎ ವಿರುದ್ಧದ ಪ್ರತಿಭಟನೆ ಮತ್ತು ಶಬರಿಮಲೆ ಚಳವಳಿ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಎಡಪಕ್ಷಗಳ ಸರ್ಕಾರ ಘೋಷಿಸಿದೆ. 2018-19ರಲ್ಲಿ ದಾಖಲಾಗಿರುವ 2,000 ಪ್ರಕರಣಗಳನ್ನು ಹಿಂಪಡೆಯುವುದಾಗಿ ಸರ್ಕಾರ ಹೇಳಿದೆ.

ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಶಬರಿಮಲೆ ವಿಷಯದ ಮೂಲಕ ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ ಅದನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಆಡಳಿತಾರೂಢ ಪಕ್ಷವು ಚಿಂತನೆ ನಡೆಸುತ್ತಿದೆ. ಅಧಿಕಾರಕ್ಕೆ ಬಂದರೆ ಪ್ರಕರಣಗಳನ್ನು ವಾಪಸ್ ಪಡೆಯುವುದಾಗಿ ಪ್ರತಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಈ ಹಿಂದೆಯೇ ಘೋಷಿಸಿತ್ತು.

         ಈ ಮಧ್ಯೆ ಬಿಜೆಪಿಯು ಉತ್ತರ ಪ್ರದೇಶದಲ್ಲಿ 'ಲವ್ ಜಿಹಾದ್' ತಡೆಗೆ ಕಾನೂನು ಜಾರಿಗೆ ತಂದಂತೆಯೇ ಕೇರಳದಲ್ಲಿಯೂ ಕಾರ್ಯಪ್ರವೃತ್ತವಾಗುವುದಾಗಿ ಹೇಳಿದೆ. ಆ ಮೂಲಕ ಹಿಂದು, ಕ್ರೈಸ್ತರ ಮತ ಸೆಳೆಯಲು ಯತ್ನಿಸುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries