ಡೆಹ್ರಾಡೂನ್ : ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ 32 ಜನರನ್ನು ಬಲಿತೆಗೆದುಕೊಂಡ ನೀರ್ಗಲ್ಲು ಸ್ಫೋಟ ದುರ್ಘಟನೆಯ ಮೊದಲ ಚಿತ್ರಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬಿಡುಗಡೆ ಮಾಡಿದೆ.
ಇಸ್ರೋದ ನ್ಯಾಷನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ (ಎನ್‌ಆರ್‌ಎಸ್‌ಸಿ) ಉಪಗ್ರಹ ಫೋಟೊಗಳನ್ನು ಬಿಡುಗಡೆ ಮಾಡಿದ್ದು, ತಪೋವನ ಜಲವಿದ್ಯುತ್ ಸ್ಥಾವರದ ಅಣೆಕಟ್ಟಿಗೆ ಉಂಟಾದ ಹಾನಿಯ ಮೇಲೆ ಬೆಳಕು ಚೆಲ್ಲಿದೆ. ಪ್ರವಾಹದಲ್ಲಿ ಕನಿಷ್ಠ ಎರಡು ಸೇತುವೆಗಳು ಕೊಚ್ಚಿ ಹೋಗಿರುವುದನ್ನು ಚಿತ್ರಗಳು ತೋರಿಸಿವೆ. ಇತರೆ ಎರಡು ರಚನೆಗಳು ಹಾನಿಗೊಳಗಾಗಿರುವುದು ಕಂಡುಬಂದಿದೆ. ಒಂದು ಜಾಗದಲ್ಲಿ ಅವಶೇಷಗಳು ಸಂಗ್ರಹವಾಗಿರುವುದನ್ನು ಒಂದು ಚಿತ್ರ ತೋರಿಸಿದೆ. ಕಟ್ಟಡವೊಂದರ ತೂಬಿನ ಗೋಡೆಗಳು ಪ್ರವಾಹದಿಂದ ಪುಡಿಯಾಗಿವೆ.
ಮತ್ತೊಂದು ಚಿತ್ರದಲ್ಲಿ ರೈನಿ ಗ್ರಾಮದಲ್ಲಿ ಮೂಲಸೌಕರ್ಯಕ್ಕೆ ಹಾನಿಯಾಗಿರುವುದು ಕಾಣಿಸುತ್ತದೆ. ಒಂದು ಸೇತುವೆ ಮತ್ತು ರಸ್ತೆ ರಿಶಿಗಂಗಾ ನದಿಯಿಂದ ಕೊಚ್ಚಿಹೋಗಿದೆ. ಗ್ರಾಮದಲ್ಲಿನ ಮತ್ತೊಂದು ವಿದ್ಯುತ್ ಸ್ಥಾವರ ಕೂಡ ತೀವ್ರ ಹಾನಿಗೊಳಗಾಗಿದೆ.
ಧೌಲಿಗಂಗಾ ನದಿಯ ನೋಟದಲ್ಲಿ ಬಂಡೆಕಲ್ಲುಗಳು ಮತ್ತು ಭಗ್ನಾವಶೇಷಗಳೇ ತುಂಬಿಕೊಂಡಿರುವುದು ಚಿತ್ರದಲ್ಲಿ ಸೆರೆಯಾಗಿದೆ. ರಿಶಿ ಗಂಗಾ ಮತ್ತು ಧೌಲಿಗಂಗಾ ನದಿಯ ಹಿನ್ನೀರು ಪ್ರದೇಶಗಳಲ್ಲಿ ಹಠಾತ್ ಪ್ರವಾಹದಿಂದ ಜೀವ ಮತ್ತು ಆಸ್ತಿ ಹಾನಿ ಉಂಟಾಗಿದೆ.
ಇಸ್ರೋ ಅಭಿವೃದ್ಧಿಪಡಿಸಿದ ಕ್ಯಾರ್ಟೋಸ್ಯಾಟ್-3, ಭೂ ಗ್ರಹಿಕಾ ಉಪಗ್ರಹವನ್ನು ಬಳಸಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಉತ್ತರಾಖಂಡದ ಘಟನೆಯಲ್ಲಿ ಇನ್ನೂ 190ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಭೀತಿ ಉಂಟಾಗಿದೆ.