ನವದೆಹಲಿ: ನಾಳೆಯಿಂದ (ಫೆಬ್ರವರಿ 15) ದೇಶಾದ್ಯಂತ ಫಾಸ್ಟ್ ಟ್ಯಾಗ್ ಅನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು, ಫಾಸ್ಟ್ ಟ್ಯಾಗ್ ಇಲ್ಲದ ವಾಹನಗಳು ಟೋಲ್ ನಲ್ಲಿ ದ್ವಿಗುಣ ಶುಲ್ಕ ಕಟ್ಟಬೇಕಾಗುತ್ತದೆ.
ಈ ಬಗ್ಗೆ ಕೇಂದ್ರ ಸಾರಿಗೆ ಇಲಾಖೆ ಮಾಹಿತಿ ನೀಡಿದ್ದು, ಫೆಬ್ರವರಿ 15 ರಿಂದ ಎಲ್ಲಾ ವಾಹನಗಳಿಗೂ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಒಂದು ವೇಳೆ ಫಾಸ್ಟ್ ಟ್ಯಾಗ್ ಅಳವಡಿಸದೇ ಟೋಲ್ ಗೆ ಬಂದರೆ ಅಂತಹ ವಾಹನಗಳು ಎರಡುಪಟ್ಟು ಹಣ ನೀಡಿಬೇಕಾಗುತ್ತದೆ ಎಂದು ಹೇಳಿದೆ. ಈ ಹಿಂದೆ ಜನವರಿ 1ರಿಂದಲೇ ಫಾಸ್ಟ್ಯಾಗ್ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಆದರೆ ನಂತರ ವಿನಾಯಿತಿ ನೀಡಿ ಫೆಬ್ರವರಿ 15 ರವರೆಗೂ ವಿಸ್ತರಿಸಲಾಗಿತ್ತು. ಅದರಂತೆ ನಾಳೆಗೆ 2ನೇ ಅಂತಿಮ ಡೆಡ್ ಲೈನ್ ಮುಕ್ತಾಯಗೊಂಡಿದ್ದು, ಸೋಮವಾರದಿಂದ ಎಲ್ಲ ವಾಹನಗಳಿಗೂ ಫಾಸ್ಟ್ಯಾಗ್ ಕಡ್ಡಾಯವಾಗಿರಲಿದೆ. ವಾಹನ ಸವಾರರು ದೇಶಾದ್ಯಂತ ಟೋಲ್ಗಳಲ್ಲಿ ಫಾಸ್ಟ್ಯಾಗ್ ಮೂಲಕ ತೆರಿಗೆ ಪಾವತಿಸಬೇಕಾಗಿದೆ. ಫಾಸ್ಟ್ಟ್ಯಾಗ್ ಇಲ್ಲದ ವಾಹನಗಳು ಎರಡು ಪಟ್ಟು ತೆರಿಗೆ ಪಾವತಿಸಬೇಕು.
ಯಾವುದೇ ಕಾರಣಕ್ಕೂ ಡೆಡ್ ಲೈನ್ ವಿಸ್ತರಣೆ ಇಲ್ಲ: ನಿತಿನ್ ಗಡ್ಕರಿ
ಯಾವುದೇ ಕಾರಣಕ್ಕೂ ಫಾಸ್ಟ್ ಟ್ಯಾಗ್ ಡೆಡ್ ಲೈನ್ ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಸ್ಪಷ್ಟಪಡಿಸಿದ್ದಾರೆ.
ಫಾಸ್ಟ್‍ಟ್ಯಾಗ್ ಅನುಷ್ಠಾನಕ್ಕೆ ನೀಡಲಾಗಿರುವ ಅಂತಿಮ ಗಡುವಿನ ವಿಸ್ತರಣೆ ಸಾಧ್ಯವಿಲ್ಲ. ವಾಹನ ಮಾಲೀಕರು ಕೂಡಲೇ ಇ-ಪಾವತಿ ಸೌಲಭ್ಯವನ್ನು ಅಳವಡಿಸಿಕೊಳ್ಳಬೇಕು. ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಶುಲ್ಕವನ್ನು ಪಾವತಿಸಲು ಅನುಕೂಲವಾಗುವ ಫಾಸ್ಟ್‍ಟ್ಯಾಗ್‍ಗಳನ್ನು 2016 ರಲ್ಲಿ ಪರಿಚಯಿಸಲಾಗಿದೆ.. ಟ್ಯಾಗ್‍ಗಳನ್ನು ಕಡ್ಡಾಯಗೊಳಿಸುವುದರಿಂದ ಟೋಲ್ ಪ್ಲಾಜಾಗಳ ಮೂಲಕ ವಾಹನಗಳು ಮನಬಂದಂತೆ ಸಂಚರಿಸುವುದು ತಪ್ಪುತ್ತದೆ. ಶುಲ್ಕ ಪಾವತಿಯನ್ನು ವಿದ್ಯುನ್ಮಾನವಾಗಿ ಮಾಡಲಾಗಿದೆ ಎಂದು ಹೇಳಿದರು.
ಇದೇ ವೇಳೆ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಫಾಸ್ಟ್‍ಟ್ಯಾಗ್‍ಗಳ ಅಳವಡಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಗಡ್ಕರಿ, ಸರ್ಕಾರವು ಮೊದಲು ಫಾಸ್ಟ್‍ಟ್ಯಾಗ್ ನೋಂದಣಿ ದಿನಾಂಕ ಮಿತಿಯನ್ನು ಎರಡು-ಮೂರು ಬಾರಿ ವಿಸ್ತರಿಸಿದೆ. ಈಗ ಮತ್ತಷ್ಟು ವಿಸ್ತರಿಸಲಾಗುವುದಿಲ್ಲ. ಈಗ, ಎಲ್ಲರೂ ತಕ್ಷಣ ಫಾಸ್ಟ್ಯಾಗ್ ಅಳವಡಿಸಿಕೊಳ್ಳಬೇಕು. ಈಗಾಗಲೇ ಶೇ.90ರಷ್ಟು ವಾಹನಗಳು ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡಿವೆ. ಶೇ.10ರಷ್ಟು ವಾಹನಗಳು ಮಾತ್ರ ಅಳವಡಿಸಿಕೊಳ್ಳಬೇಕಿದೆ. ಎಲ್ಲ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ಸೌಲಭ್ಯವಿದೆ ಎಂದು ಹೇಳಿದರು.