ಬದಿಯಡ್ಕದಲ್ಲಿ ನಡೆದ ಕಾಸರಗೋಡು ವಿಧಾನಸಭಾ ಕ್ಷೇತ್ರದ ಬಿಜೆಪಿ ಬೂತ್ ಪ್ರಮುಖರ ಸಭೆ
ಬದಿಯಡ್ಕ: ಬೂತ್ ಮಟ್ಟದ ಕಾರ್ಯಕರ್ತರ ಶ್ರಮವು ಕಾಸರಗೋಡು ವಿದಾನಸಭಾ ಕ್ಷೇತ್ರದ ಫಲಿತಾಂಶವನ್ನು ನಿರ್ಣಯಿಸಲಿದೆ. ತನ್ನ ಬೂತ್‍ಗೆ ತಾನೇ ಅಭ್ಯರ್ಥಿ ಎಂಬಂತೆ ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ದುಡಿದಾಗ ಕಾಸರಗೋಡು ಜಿಲ್ಲೆಯಲ್ಲಿ ತಾವರೆ ಅರಳಲಿದೆ ಎಂದು ಬಿಜೆಪಿ ಕೇರಳ ರಾಜ್ಯ ಸಹಪ್ರಭಾರಿ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ತಿಳಿಸಿದರು.
ಕೇರಳ ವಿದಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಶನಿವಾರ ನಡೆದ ಕಾಸರಗೋಡು ವಿದಾನಸಭಾ ಕ್ಷೇತ್ರದ ನಾಯಕರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಾಸರಗೋಡು ಮತ್ತು ಮಂಜೇಶ್ವರ ಕ್ಷೇತ್ರಗಳನ್ನು ಈ ಬಾರಿ ಬಿಜೆಪಿ ಗೆಲ್ಲಲೇ ಬೇಕಿದೆ. ಬದಲಾಗಿ ಬರುತ್ತಿರುವ ರಾಜಕೀಯ ಪಕ್ಷಗಳು ಕೇರಳವನ್ನು ಅವನತಿಯತ್ತ ಕೊಂಡೊಯ್ಯುತ್ತಿದೆ. ಯುಡಿಎಫ್ ಹಾಗೂ ಎಲ್‍ಡಿಎಫ್ ಸರ್ಕಾರಗಳು ಪ್ರತೀ ಬಾರಿಯೂ ಭ್ರಷ್ಟಾಚಾರದ ಮೂಲಕ ಕೇರಳದಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿಯ ಅಭ್ಯರ್ಥಿಗಳು ಗೆದ್ದುಬಂದರೆ ಕೇರಳ ರಾಜ್ಯವು ಉತ್ತಮವಾದ ಬದಲಾವಣೆಯನ್ನು ಕಾಣಲಿದೆ. ಈ ಬಾರಿಯ ಬಜೆಟ್‍ನಲ್ಲಿ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರವು ಬಹುದೊಡ್ಡ ಕೊಡುಗೆಯನ್ನು ನೀಡಿದೆ ಎಂದರು.
ಬಿಜೆಪಿ ಕೇರಳ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಟಿ.ರಮೇಶ್ ಮಾತನಾಡಿ ಮುಸ್ಲಿಂಲೀಗನ್ನು ಮುಂದಿರಿಸಿ ಯುಡಿಎಫ್ ನ್ನು ಆಕ್ರಮಿಸಲು ಸಿಪಿಎಂ ಕಾಯುತ್ತಿದೆ. ಮುಸ್ಲಿಂಲೀಗಿನ ಮುಂದೆ ಯುಡಿಎಫ್‍ನ ಬಿ ಟೀಂ ಆಗಿ ಕಾಂಗ್ರೆಸ್ ಬದಲಾಗಿದೆ. ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಬೂತ್ ಮಟ್ಟದಲ್ಲಿ ಪ್ರತೀ ಮನೆಗೆ ತಲುಪಿಸಿ ಕಾಸರಗೋಡು ಮಂಡಲದಿಂದ ಬಿಜೆಪಿ ಶಾಸಕನ್ನು ಆಯ್ಕೆಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬ ಕಾರ್ಯಕರ್ತನೂ ವಹಿಸಿಕೊಳ್ಳಬೇಕು ಎಂದು ಸಂಘಟನಾತ್ಮವಾದ ಅನೇಕ ವಿಚಾರಗಳನ್ನು ತಿಳಿಸಿದರು.
ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಭಾರಿ ರಘುನಾಥ್ ಮಾತನಾಡಿ ಬೂತ್ ಮಟ್ಟದಲ್ಲಿ ಗೆದ್ದರೆ ಮಂಡಲವನ್ನು ಗೆಲ್ಲಬಹುದು. ಜನಸೇವೆಯೊಂದಿಗೆ ಕಾರ್ಯಕರ್ತರು ನಾಡಿಗಿಳಿಯಬೇಕು ಎಂದರು. ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ನೇತಾರರಾದ ನ್ಯಾಯವಾದಿ ಕೆ.ಶ್ರೀಕಾಂತ್, ಎನ್. ಸತೀಶ್, ಎಂ. ಸಂಜೀವ ಶೆಟ್ಟಿ, ನ್ಯಾಯವಾದಿ ಸದಾನಂದ ರೈ, ರಾಮಪ್ಪ ಮಂಜೇಶ್ವರ, ಎಂ. ಸುಧಾಮ ಗೋಸಾಡ, ವಿಜಯ ರೈ, ಗೋಪಾಲಕೃಷ್ಣ ಕೂಡ್ಲು, ಶೈಲಜಾ ಭಟ್, ಸವಿತಾ ಟೀಚರ್, ಕೆ.ಎನ್.ಕೃಷ್ಣ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಸುನಿಲ್ ಪಿ.ಆರ್. ವಂದಿಸಿದರು.