ನವದೆಹಲಿ: ಆಸ್ತಿಗಾಗಿ ಅಣ್ಣ-ತಮ್ಮ, ಅಪ್ಪ-ಅಮ್ಮ, ಸಂಬಂಧಿಕರನ್ನು, ದಾಯಾದಿಗಳನ್ನು ಕೊಂದು ಹಾಕಿದ ಉದಾಹರಣೆಗಳಿವೆ. ಆದರೆ ಇಲ್ಲಿ ಈ ದೇವಸ್ಥಾನದ ಜಾಗವನ್ನು ಕಬಳಿಸಲು ದೇವರನ್ನೇ ಕೊಂದು ಹಾಕಲಾಗಿದೆ. ದೇವರಾದ ರಾಮ-ಕೃಷ್ಣರ ಹೆಸರಿನಲ್ಲಿದ್ದ ಜಾಗವನ್ನು ಈ ವಂಚಕರು 'ದೇವರು ಸತ್ತು ಹೋಗಿದ್ದಾರೆ' ಎಂದು ಘೋಷಿಸಿ ತಮ್ಮಗಾಗಿಸಿಕೊಂಡಿದ್ದಾರೆ.
ಉತ್ತರಪ್ರದೇಶದ ಲಕ್ನೋದ ಮೋಹನ್ಲಾಲ್ಗಂಜ್ ಎಂಬಲ್ಲಿನ ಕೂಷ್ಮೌರ ಹಲುವಾಪುರ್ ಎಂಬ ಗ್ರಾಮದಲ್ಲಿನ ರಾಮಕೃಷ್ಣ ದೇವಸ್ಥಾನದ ಜಾಗವನ್ನು ವಂಚಕರು ತಮ್ಮದಾಗಿಸಿಕೊಂಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ.
ನೂರು ವರ್ಷ ಇತಿಹಾಸ ಉಳ್ಳ ಈ ದೇವಸ್ಥಾನ ಇಲ್ಲಿನ ದೇವರಾದ ರಾಮಕೃಷ್ಣರ ಹೆಸರಿನ ಟ್ರಸ್ಟ್ನಿಂದಲೇ ನಿರ್ವಹಣೆ ಆಗುತ್ತಿತ್ತು. ಬಹಳ ಹಿಂದೆ ಗಯಾ ಪ್ರಸಾದ್ ಎಂಬ ವ್ಯಕ್ತಿ ತಾನು ರಾಮಕೃಷ್ಣರ ತಂದೆ ಎಂಬುದಾಗಿ ಟ್ರಸ್ಟ್ ದಾಖಲೆಯಲ್ಲಿ ತನ್ನ ಹೆಸರನ್ನು ಸೇರಿಸಿದ್ದ. 1987ರಲ್ಲಿ ಕ್ರೋಢೀಕರಣ ಸಮಯದಲ್ಲಿ ರಾಮ-ಕೃಷ್ಣರೇ ಸತ್ತುಹೋಗಿದ್ದಾರೆಂದು ಘೋಷಿಸಿ, ಟ್ರಸ್ಟ್ಅನ್ನು ಗಯಾ ಪ್ರಸಾದ್ಗೆ ವರ್ಗಾಯಿಸಲಾಗಿತ್ತು. ನಂತರ 1991ರಲ್ಲಿ ಗಯಾ ಪ್ರಸಾದ್ ಸತ್ತು ಹೋಗಿದ್ದಾರೆ ಎಂದು ಘೋಷಿಸಿ ಆತನ ಸಹೋದರರಾದ ರಾಮ್ನಾಥ್ ಹಾಗೂ ಹರಿದ್ವಾರ್ ಅವರ ಹೆಸರಿಗೆ ಟ್ರಸ್ಟ್ಅನ್ನು ವರ್ಗಾಯಿಸಲಾಗಿತ್ತು. ಆದರೆ 2016ರಲ್ಲಿ ದೇವಸ್ಥಾನದ ಅಸಲಿ ಟ್ರಸ್ಟೀ ಸುಶೀಲ್ ಕುಮಾರ್ ತ್ರಿಪಾಠಿ ಅವರು ನೈಬ್ ತಹಸೀಲ್ದಾರ್ ಅವರಿಗೆ ಈ ವಿಷಯ ತಿಳಿಸಿ ಗಮನ ಸೆಳೆದಿದ್ದರು. ತಹಸೀಲ್ದಾರರ ಕಚೇರಿಯಿಂದ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರ್, ಆ ಬಳಿಕ ಉಪ ಮುಖ್ಯಮಂತ್ರಿ ಅವರ ಕಚೇರಿಗೂ ಈ ಕುರಿತ ದೂರು ಹೋದರೂ ಯಾವುದೇ ಕ್ರಮ ಜರುಗಿರಲಿಲ್ಲ.
ಡಿಸಿಎಂ ದಿನೇಶ್ ಶರ್ಮಾ ಅವರು ಈ ಪ್ರಕರಣದ ತನಿಖೆ ನಡೆಸುವಂತೆ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಪ್ರಫುಲ್ಲ ತ್ರಿಪಾಠಿ ಅವರಿಗೆ ವಹಿಸಿದರು. ದೇವಸ್ಥಾನಕ್ಕೆ ಸೇರಿದ 0.73 ಹೆಕ್ಟೇರ್ ಜಾಗವನ್ನು ಕಬಳಿಸಲು ಯಾರೋ ಮೂಲ ಟ್ರಸ್ಟಿಯ ಹೆಸರಿನಲ್ಲಿ ದಾಖಲೆಗಳನ್ನು ಫೋರ್ಜರಿ ಮಾಡಿರುವುದು ಬೆಳಕಿಗೆ ಬಂದಿತ್ತು. ದೇವಸ್ಥಾನದ ಜಾಗ ದೇವರ ಹೆಸರಲ್ಲೇ ರಿಜಿಸ್ಟರ್ಡ್ ಆಗಿದ್ದು, ದೇವಸ್ಥಾನದ ಜಾಗ ಗ್ರಾಮಸಭೆಯ ಬಂಜರು ಭೂಮಿ ಎನ್ನಲಾಗಿದೆ.ಇದೀಗ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮೆಟ್ಟಿಲೇರಿದ್ದು, ಪ್ರಕರಣ ಇನ್ನೂ ವಿಚಾರಣೆ ಹಂತದಲ್ಲಿದೆ.