ತಿರುವನಂತಪುರಂ, ಫೆಬ್ರವರಿ 20: 'ಮೆಟ್ರೋ ಮ್ಯಾನ್' ಖ್ಯಾತಿಯ ಇ. ಶ್ರೀಧರನ್ ಅವರು ಬಿಜೆಪಿ ಸೇರ್ಪಡೆಯಾದ ಬೆನ್ನಲ್ಲೇ ಕೇರಳದಿಂದ ಮತ್ತೊಬ್ಬ ಸೆಲೆಬ್ರಿಟಿ ಕೂಡ ಕೇಸರಿ ಪಾಳೆಯದತ್ತ ಮುಖ ಮಾಡಿದ್ದಾರೆ. 'ಪಯ್ಯೋಲಿ ಎಕ್ಸ್‌ಪ್ರೆಸ್' ಖ್ಯಾತಿಯ ಭಾರತದ ಮಾಜಿ ಅಥ್ಲೀಟ್ ಹಾಗೂ ಒಲಿಂಪಿಯನ್ ಪಿ.ಟಿ. ಉಷಾ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ ಎನ್ನಲಾಗಿದೆ. ಉಷಾ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಜವಾಬ್ದಾರಿಯನ್ನು ಕೇರಳ ರಾಜ್ಯ ಘಟಕದ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಅವರಿಗೆ ವಹಿಸಲಾಗಿದೆ.
ಕೇರಳದಲ್ಲಿ ಚುನಾವಣೆಗೆ ಪೂರ್ವ ತಯಾರಿ ನಡೆಸಲು ಬಿಜೆಪಿ 'ವಿಜಯ ಯಾತ್ರೆ' ಆಯೋಜಿಸುತ್ತಿದ್ದು, ಈ ಸಂದರ್ಭದಲ್ಲಿ ಪಿಟಿ ಉಷಾ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ರೈತರ ಪ್ರತಿಭಟನೆ ವಿಚಾರದಲ್ಲಿ ವಿದೇಶಿಗರು ಪ್ರತಿಕ್ರಿಯೆ ನೀಡಿದ ಸಂದರ್ಭದಲ್ಲಿ ಭಾರತ ಸರ್ಕಾರವನ್ನು ಬೆಂಬಲಿಸಿ ಟ್ವೀಟ್ ಮಾಡಿದ ಸೆಲೆಬ್ರಿಟಿಗಳಲ್ಲಿ ಪಿಟಿ ಉಷಾ ಕೂಡ ಸೇರಿದ್ದರು. ಅದೇ ವೇಳೆ ಪಿಟಿ ಉಷಾ ಅವರ ಬಿಜೆಪಿ ಸೇರ್ಪಡೆಯ ಚರ್ಚೆ ಶುರುವಾಗಿತ್ತು. ಈ ಹಿಂದೆಯೂ ಪಿಟಿ ಉಷಾ ಅವರ ಬಿಜೆಪಿ ಸೇರ್ಪಡೆ ಚರ್ಚೆ ನಡೆದಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು.
ಕೇರಳ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯು ಪಕ್ಷಕ್ಕೆ ಸೆಲೆಬ್ರಿಟಿಗಳನ್ನು ಸೆಳೆದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದೆ. ನಟ ಉನ್ನಿ ಮುಕುಂದನ್ ಜತೆ ಸುರೇಂದ್ರ ಅವರು ಮಾತುಕತೆ ನಡೆಸಿ, ಚುನಾವಣೆಗೆ ಸ್ಪರ್ಧಿಸುವಂತೆ ಆಹ್ವಾನಿಸಿದ್ದರು. ಆದರೆ ಉನ್ನಿ ಮುಕುಂದನ್ ಪ್ರಸ್ತುತ ಸಿನಿಮಾಗಳ ಮೇಲೆ ಗಮನ ಹರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸ್ಪರ್ಧೆಯ ಬಗ್ಗೆ ಪರಿಗಣಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ನಟಿ ಅನುಶ್ರೀ ಜತೆ ಕೂಡ ಬಿಜೆಪಿ ಸಮಾಲೋಚನೆ ನಡೆಸಿದ್ದು, ಸಕ್ರಿಯ ರಾಜಕಾರಣದ ಬಗ್ಗೆ ತಮಗೆ ಆಸಕ್ತಿ ಇಲ್ಲ ಎಂದು ಅವರು ಹೇಳಿದ್ದಾರೆ. ಕಿರುತೆರೆ ನಟಿ ನಿಶಾ ಸಾರಂಗ್, ನಟಿ ಮಲ್ಲಿಕಾ ಸುಕುಮಾರನ್ ಜತೆ ಕೂಡ ಮಾತುಕತೆ ನಡೆಯುತ್ತಿದೆ. ಮಲ್ಲಿಕಾ ಅವರು ಸ್ಪರ್ಧೆಗೆ ಇಳಿಯಲು ನಿರಾಕರಿಸಿದ್ದಾರೆ. ಆದರೆ ಚುನಾವಣಾ ಪ್ರಚಾರಕ್ಕೆ ಆಗಮಿಸುವ ಭರವಸೆ ನೀಡಿದ್ದಾರೆ.
ರಮೇಶ್ ಪಿಶರೋಡಿ, ಧರ್ಮಾಜನ್ ಬೊಲ್ಗಟ್ಟಿ, ಎಡವೆಲಾ ಬಾಬು ಮುಂತಾದ ನಟರು ರಮೇಶ್ ಚೆನ್ನಿತ್ತಲಾ ಆಯೋಜಿಸಿದ್ದ ಐಶ್ವರ್ಯಾ ಕೇರಳ ಯಾತ್ರಾದಲ್ಲಿ ಭಾಗವಹಿಸಿದ್ದರು. ಸಾಂಸ್ಕೃತಿಕ ವಲಯದಿಂದ ಹೆಚ್ಚು ಜನರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಬಿಜೆಪಿ ಪ್ರಯತ್ನಗಳನ್ನು ನಡೆಸುತ್ತಿದೆ. ಕಳೆದ ಚುನಾವಣೆ ವೇಳೆ ಕ್ರಿಕೆಟಿಗ ಎಸ್ ಶ್ರೀಶಾಂತ್, ಭೀಮನ್ ರಘು ಮತ್ತು ರಾಜೇಸನ್ ಬಿಜೆಪಿ ಸೇರಿಕೊಂಡಿದ್ದಾರೆ.