ನವದೆಹಲಿ: ಬ್ರಿಟನ್ ನಂತರ ಈಗ ವಿಶ್ವದೆಲ್ಲೆಡೆ ಆತಂಕ ಸೃಷ್ಟಿಸಿರುವ ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ವೈರಸ್ ಈಗ ಭಾರತಕ್ಕೂ ವಕ್ಕರಿಸಿದ್ದು, ದೇಶದಲ್ಲಿ ನಾಲ್ಕು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ಇಂದು ಕೇಂದ್ರ ಆರೋಗ್ಯ ಸಚಿವಾಲಯ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಸಿಎಂಆರ್ ಡೈರೆಕ್ಟರ್ ಜನರಲ್ ಬಲರಾಮ್ ಭಾರ್ಗವ ಅವರು, ಕಳೆದ ಜನವರಿಯಲ್ಲಿ ಆಫ್ರಿಕಾದಿಂದ ಭಾರತಕ್ಕೆ ಮರಳಿದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರ ಕೊರೋನಾ ವೈರಸ್ ಪತ್ತೆಯಾಗಿದೆ ಎಂದು ಹೇಳಿದರು.
"ಭಾರತದಲ್ಲಿ, ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ ನಾಲ್ವರಲ್ಲಿ ದಕ್ಷಿಣ ಆಫ್ರಿಕಾದ ಕೋವಿಡ್ -19 ಪತ್ತೆಯಾಗಿದೆ. ಎಲ್ಲಾ ಪ್ರಯಾಣಿಕರು ಹಾಗೂ ಅವರ ಸಂಪರ್ಕಿತರನ್ನು ಪರೀಕ್ಷಿಸಲಾಗಿದೆ ಮತ್ತು ಅವರನ್ನು ಕ್ವಾರಂಟೈನ್ ಮಾಡಲಾಗಿದೆ' ಎಂದು ಅವರು ತಿಳಿಸಿದರು.
ದೇಶದ ಒಬ್ಬ ವ್ಯಕ್ತಿಯಲ್ಲಿ ಬ್ರೆಜಿಲಿಯನ್ ರೂಪಾಂತರಿ ವೈರಸ್ ಸಹ ಪತ್ತೆಯಾಗಿದೆ ಎಂದು ಭಾರ್ಗವ ಅವರು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ರೂಪಾಂತರಿ ಕೊರೋನಾ ಪತ್ತೆಯಾದವರಲ್ಲಿ ಒಬ್ಬರು ಅಂಗೋಲಾದಿಂದ, ಒಬ್ಬರು ಟಾಂಜಾನಿಯಾದಿಂದ ಮತ್ತು ಉಳಿದ ಇಬ್ಬರು ದಕ್ಷಿಣ ಆಫ್ರಿಕಾದಿಂದ ಮರಳಿದ್ದಾರೆ ಎಂದರು.