ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ಫೆಬ್ರವರಿ 6ರಂದು ದೇಶದಾದ್ಯಂತ ರೈತರು ಹಮ್ಮಿಕೊಂಡಿರುವ ಚಕ್ಕಾ ಜಾಮ್(ಹೆದ್ದಾರಿಗಳ ಬಂದ್) ಪ್ರತಿಭಟನೆಗೆ ಕಾಂಗ್ರೆಸ್ ಬೆಂಬಲ ಸೂಚಿಸಿದೆ.
ದೇಶದಾದ್ಯಂತ ಇಂದು(ಶನಿವಾರ) ಮೂರು ಗಂಟೆಗಳ ಕಾಲ ರೈತರು ಕರೆ ನೀಡಿರುವ ಚಕ್ಕಾ ಜಾಮ್ ಪ್ರತಿಭಟನೆಗೆ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದೇ ವೇಳೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಕೆಸಿ ವೇಣುಗೋಪಾಲ್ ಅವರು, ಕೃಷಿ ಸಚಿವರು ಏನು ಹೇಳಿದರೂ ಅದು "ಸಂಪೂರ್ಣ ಸತ್ಯವನ್ನು ನಾಶಮಾಡುವಂತಹದ್ದು ಮತ್ತು ತೀವ್ರ ಆಕ್ಷೇಪಾರ್ಹ" ಎಂದಿದ್ದಾರೆ.
ಕೇಂದ್ರ ಸರ್ಕಾರ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಬೇಕು ಮತ್ತು ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಮೂಲಕ ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.