ನವದೆಹಲಿ: 'ಮಾನ್ಯತೆ ಪಡೆಯದ ಕಾಲೇಜಿನಿಂದ ಮಾನ್ಯತೆ ಪಡೆದ ಕಾಲೇಜಿಗೆ ಎಂಬಿಬಿಎಸ್ ವಿದ್ಯಾರ್ಥಿಯ ವಲಸೆಗೆ ಅವಕಾಶವಿಲ್ಲ. ಎರಡೂ ಕಾಲೇಜುಗಳು ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆಯನುಸಾರ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿದ್ದರಷ್ಟೇ ವಲಸೆಗೆ ಅವಕಾಶ ನೀಡಬಹುದು' ಎಂದು ಸುಪ್ರಿಂ ಕೋರ್ಟ್ ಆದೇಶಿಸಿದೆ.
ಕಾಯ್ದೆಯ ನಿಯಮಗಳ ಉಲ್ಲೇಖವಿಲ್ಲದೇ ಕೇವಲ 'ವಲಸೆ' ಎಂಬ ಪದವನ್ನಷ್ಟೇ ಪರಿಗಣಿಸಲಾಗದು. ಕಾಯ್ದೆಯ ಪ್ರಕಾರ, ಎರಡೂ ಕಾಲೇಜುಗಳು ಮಾನ್ಯತೆ ಪಡೆದಿರಬೇಕು ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರರಾವ್ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠ ಸ್ಪಷ್ಟಪಡಿಸಿತು.
ರಾಜಸ್ಥಾನದಲ್ಲಿ ಅನಂತ ವೈದ್ಯಕೀಯ ವಿಜ್ಞಾನ ಸಂಸ್ಥೆಯಿಂದ ಡಾ.ಎಸ್.ಎನ್.ಮೆಡಿಕಲ್ ಕಾಲೇಜಿಗೆ ವಿದ್ಯಾರ್ಥಿಯೊಬ್ಬರ ವಲಸೆಗೆ ಅವಕಾಶ ಕಲ್ಪಿಸಿದ್ದ ರಾಜಸ್ಥಾನ ಹೈಕೋರ್ಟ್ ಆದೇಶವನ್ನೂ ರದ್ದುಪಡಿಸಿತು. 'ಈ ಕುರಿತು ಹೈಕೋರ್ಟ್‌ನ ವ್ಯಾಖ್ಯಾನವು ತಪ್ಪಾಗಿದೆ. ವಿದ್ಯಾರ್ಥಿಯ ವರ್ಗಾವಣೆ ಕುರಿತು ನಿಯಮ ಸ್ಪಷ್ಟವಾಗಿದೆ' ಎಂದು ಪೀಠ ತಿಳಿಸಿತು.