ತಿರುವನಂತಪುರ: ವೇತನ ಸುಧಾರಣಾ ಆಯೋಗದ ಶಿಫಾರಸುಗಳನ್ನು ಮೂರು ಸದಸ್ಯರ ಅಧಿಕೃತ ಮಟ್ಟದ ಸಮಿತಿಗೆ ಪರಿಗಣನೆಗೆ ಕಳುಹಿಸಲಾಗಿದೆ. ಬುಧವಾರ ಸಭೆ ಸೇರಿದ ಕ್ಯಾಬಿನೆಟ್ ಈ ನಿರ್ಧಾರ ಕೈಗೊಂಡಿದೆ. ಪರಿಷ್ಕøತ ಸಂಬಳ ಮತ್ತು ಪಿಂಚಣಿಯನ್ನು ಏಪ್ರಿಲ್ 1 ರಿಂದ ನೀಡಲಾಗುವುದು ಎಂದು ಹಣಕಾಸು ಸಚಿವ ಥಾಮಸ್ ಐಸಾಕ್ ತಿಳಿಸಿದ್ದಾರೆ.
ಹಣಕಾಸು ವಿಭಾಗದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯ ಸಮಿತಿಯು ವೇತನ ಸುಧಾರಣಾ ಸಮಿತಿಯ ವರದಿಯಲ್ಲಿನ ಶಿಫಾರಸುಗಳನ್ನು ಪರಿಶೀಲಿಸಲಿದೆ. ಶಿಫಾರಸುಗಳ ಕುರಿತು ಸರ್ಕಾರದ ಮುಂದಿನ ನಿರ್ಧಾರವು ಈ ವರದಿಯನ್ನು ಆಧರಿಸಿರುತ್ತದೆ. ತನ್ನ ವರದಿಯನ್ನು ಆದಷ್ಟು ಬೇಗ ಸಲ್ಲಿಸುವಂತೆ ಸಂಪುಟ ಸಮಿತಿಗೆ ನಿರ್ದೇಶನ ನೀಡಿತು. ಪಿಂಚಣಿ ವಯಸ್ಸನ್ನು ಒಂದು ವರ್ಷ ಹೆಚ್ಚಿಸುವ ಶಿಫಾರಸನ್ನು ಸರ್ಕಾರ ತಿರಸ್ಕರಿಸಿದೆ.
ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಪಿಂಚಣಿ ಸುಧಾರಣೆಯನ್ನು ನಿರ್ಧರಿಸಲಾಗುತ್ತದೆ. ಏತನ್ಮಧ್ಯೆ, ಹೊಸ ವೇತನ ಸುಧಾರಣೆಯ ವಿರುದ್ಧ ಸರ್ಕಾರಿ ನೌಕರರ ಒಕ್ಕೂಟವಾದ ಫೆಟೊ ವಿರೋಧ ಸೂಚಿಸಿದೆ. ನೌಕರರು ಪಡೆಯುತ್ತಿರುವ ಅನೇಕ ಪ್ರಯೋಜನಗಳನ್ನು ನಿರಾಕರಿಸಿದ ವೇತನ ಸುಧಾರಣಾ ವರದಿಯು ನೌಕರರ ಬಗ್ಗೆ ಎಡ ಸರ್ಕಾರದ ನೀತಿಯ ಭಾಗವಾಗಿದೆ ಎಂಬುದು ಫೆಟೊ ಆರೋಪಿಸಿದೆ.