ನವದೆಹಲಿ: ಕಾನೂನು ಉಲ್ಲಂಘನೆ ಹಾಗೂ ದೇಶದ ಸುರಕ್ಷತೆಯ ಮೇಲೆ ಪರಿಣಾಮ ಬೀರಬಹುದೆನ್ನುವ ಕಾರಣಕ್ಕೆ ತನ್ನ ಹೊಸ ಗೌಪ್ಯತೆ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ತ್ವರಿತ ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಾಪ್‍ಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠವು ಈ ವಿಷಯವನ್ನು ಇದಾಗಲೇ ದೆಹಲಿ ಹೈಕೋರ್ಟ್ ವಿಚಾರಣೆ ನಡೆಸುತ್ತಿದೆ ಮತ್ತು ಅರ್ಜಿದಾರರು ಸೂಕ್ತ ಪರಿಹಾರವನ್ನು ಅಲ್ಲೇ ಆಯ್ಕೆ ಮಾಡಬಹುದು ಎಂದಿದೆ. ನ್ಯಾಯಮೂರ್ತಿಗಳಾದ ಎ.ಎಸ್.ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ನ್ಯಾಯಪೀಠ, ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟವು ಸಲ್ಲಿಸಿದ್ದ ಮನವಿಯನ್ನು ಆಲಿಸಿತ್ತು, ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಕೇಂದ್ರಕ್ಕೆ ನಿರ್ದೇಶನ ಮತ್ತು ವಾಟ್ಸಾಪ್ ನಂತಹ ದೊಡ್ಡ ತಂತ್ರಜ್ಞಾನ ಆಧಾರಿತ ಕಂಪನಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸಬೇಕೆಂದು ಅರ್ಜಿದಾರರು ಕೇಳಿದ್ದರು, ವಾಟ್ಸಾಪ್ ಇಂಕ್, ಫೇಸ್‍ಬುಕ್ ಇಂಕ್ ಮತ್ತು ಫೇಸ್‍ಬುಕ್ ಇಂಡಿಯಾ ಆನ್‍ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ವಕೀಲ ವಿವೇಕ್ ನಾರಾಯಣ್ ಶರ್ಮಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, ಕೇಂದ್ರವು ತನ್ನ ಸಾಂವಿಧಾನಿಕ ಕರ್ತವ್ಯ ಮತ್ತು ಭಾರತದ ನಾಗರಿಕರ ಗೌಪ್ಯತೆ ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದೆ ಎಂಬ ಆರೋಪದ ಕಾರಣ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅಗತ್ಯವಾಗಿದೆ ಎಂದು ತಿಳಿಸಿತ್ತು.
"... ಜನವರಿ 4, 2021 ರಂದು, ವಾಟ್ಸಾಪ್ ತನ್ನ ಹೊಸ ಗೌಪ್ಯತೆ ನೀತಿಯನ್ನು ಪರಿಚಯಿಸಿತು, ಅದರ ಮೂಲಕ ಅದು ತನ್ನ ಓಪ್ಟ್ ಔಟ್ ಪಾಲಿಸಿಯನ್ನು' ರದ್ದುಗೊಳಿಸಿತು ಮತ್ತು ಇಂದಿನಿಂದ, ಬಳಕೆದಾರರು ತಮ್ಮ ಡೇಟಾವನ್ನು ಬಳಸಲು ಫೇಸ್‍ಬುಕ್ ಮತ್ತು ಅದರ ಸಮೂಹ ಕಂಪನಿಗಳೊಂದಿಗೆ ಹಂಚಿಕೊಳ್ಳವಿಕೆಗೆ ಕಡ್ಡಾಯವಾಗಿ ಸಮ್ಮತಿಸಬೇಕಾಗುತ್ತದೆ. ಹೊಸ ನೀತಿ 2021 ರ ಫೆಬ್ರವರಿ 8 ರಿಂದ ಜಾರಿಗೆ ಬರಲಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಾಟ್ಸಾಪ್ ನ ನವೀಕರಿಸಿದ ಗೌಪ್ಯತೆ ನೀತಿಯು ನಾಗರಿಕರ ಗೌಪ್ಯತೆಯ ಮೂಲಭೂತ ಹಕ್ಕಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಅವರ ಪ್ರಾತಿನಿಧ್ಯವನ್ನು ಮೂಲಭೂತವಾಗಿ ವಿರೋಧಿಸುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದರು.