ಉಪ್ಪಳ: ಮಂಜೇಶ್ವರ ಪ್ರಾಥಮಿಕ ಸಹಕಾರಿ ಕೃಷಿ ಗ್ರಾಮಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾಗಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್. ಶನಿವಾರ ಪುನರಾಯ್ಕೆ ಆಗಿದ್ದಾರೆ.
ಫೆ.14ರಂದು ನಡೆದ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸಹಕಾರಿ ಭಾರತೀ ಹಾಗೂ ಪ್ರಭಾಕರ ಚೌಟ ಪ್ಯಾನೆಲ್ ನ್ನು ಸೋಲಿಸಿ ಸೋಮಶೇಖರ್ ನೇತೃತ್ವ ಪ್ರಚಂಡ ವಿಜಯ ಸಾಧಿಸಿತ್ತು. ಶನಿವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಮಶೇಖರ್ ಜೆ.ಎಸ್. ಅಧ್ಯಕ್ಷರಾಗಿ ಹಾಗೂ ಮಂಜುನಾಥ ಆಳ್ವ ಮಡ್ವ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು.
ಈ ಹಿಂದೆ ಈ ಬ್ಯಾಂಕಿನ ಅಧ್ಯಕ್ಷರಾಗಿದ್ದ ಸೋಮಶೇಖರ್ ಅವರು 2018ರಲ್ಲಿ ಕೆ.ಸುಧಾಕರನ್ ಅವರು ನಡೆಸಿದ ವಿಶ್ವಾಸ ಸಂರಕ್ಷಣಾ ಯಾತ್ರೆಯ ಯಶಸ್ವಿಯ ರೂವಾರಿಗಳಾಗಿದ್ದರು. ಈ ಐತಿಹಾಸಿಕ ಹೋರಾಟಕ್ಕೆ ನೇತೃತ್ವ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪಕ್ಷದ ಕೆಲವು ನೇತಾರರು ಗುಂಪು ರಾಜಕೀಯ ನಡೆಸಿ ಅಧ್ಯಕ್ಷ ಪದವಿಯಿಂದ ಅನರ್ಹಗೊಳಿಸುವ ಕುಟೀಲ ನೀತಿ ಅನುಸರಿಸಿದ್ದರು. ಇದರ ವಿರುದ್ಧ ಕೇರಳ ಹೈಕೋರ್ಟ್ ನಲ್ಲಿ ಕಾನೂನು ದಾವೆ ಹೂಡಿದ ಸೋಮಶೇಖರ್ ಸತತ ಹೋರಾಟ ನಡೆಸಿ 2019 ಜೂನ್ 6ರಂದು ಹಿಂತಿರುಗಿ ಅಧಿಕಾರಕ್ಕೇರಿದ್ದು ಅಧ್ಯಕ್ಷರಾಗಿದ್ದರು.
ಇದೀಗ ಈ ಸಲದ ಚುನಾವಣೆಯ ಅಭ್ಯರ್ಥಿ ಪ್ಯಾನೆಲ್ ರೂಪೀೀಕರಣದ ಜವಾಬ್ದಾರಿಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿಯು ಡಿಸಿಸಿ ಪ್ರಧಾನ ಕಾರ್ಯದರ್ಶಿ ಕರುಂತ್ತಪ್ಪನ್ ಹಾಗೂ ಎಂ.ಸಿ.ಪ್ರಭಾಕರ ಅವರಿಗೆ ನೀಡಿತ್ತು. ಇದನ್ನು ಲೆಕ್ಕಿಸದೆ ಸ್ವತಃ ಸೋಮಶೇಖರ್ ನೇತೃತ್ವದ ವಿಭಾಗ ತನ್ನದೇ ಆದ ಪ್ಯಾನೆಲ್ ತಯಾರಿಸಿ ಯುಡಿಎಫ್ ಮಂಜೇಶ್ವರ ವಿಧಾನ ಸಭಾ ಕನ್ವೀನರ್ ಮಂಜುನಾಥ ಆಳ್ವ ಸಹಿತ 13 ಮಂದಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಇದರಲ್ಲಿ 3 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು ಉಳಿದ 10ಮಂದಿ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ನಾಯಕ್ ಶೇಣಿ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಲಕ್ಷ್ಮಣ ಪ್ರಭು ಕುಂಬಳೆ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಹನೀಫ್ ಗೆಲುವು ಸಾಧಿಸಿದ ಇತರ ಪ್ರಮುಖರಾಗಿದ್ದಾರೆ.
ಈ ಬಾರಿಯ ತ್ರಿಸ್ತರ ಪಂಚಾಯತ್ ಚುನಾವಣೆಯಲ್ಲೂ ಎಣ್ಮಕಜೆ ಪಂಚಾಯತಿನಲ್ಲಿ ಸೋಮಶೇಖರ್ ನೇತೃತ್ವದ ಪಕ್ಷ ಅಭೂತಪೂರ್ವ ಜಯ ಗಳಿಸಿ ಎಣ್ಮಕಜೆ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು ಮಾತ್ರವಲ್ಲದೆ ಮಂಜೇಶ್ವರ ಹಾಗೂ ಕಾಸರಗೋಡು ವಿಧಾನ ಸಭಾ ಕ್ಷೇತ್ರಗಳಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ಪಂಚಾಯತ್ ಏಣ್ಮಕಜೆ ಗ್ರಾ.ಪಂ.ಎಂಬುದು ಇಲ್ಲಿ ಗಮನಾರ್ಹವಾಗಿದೆ. ಇದೀಗ ತಾಲೂಕು ಕೃಷಿ ಅಭಿವೃದ್ಧಿ ಬ್ಯಾಂಕ್ ಚುನಾವಣೆಯಲ್ಲೂ ಇವರು ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಇನ್ನಷ್ಟು ರಾಜಕೀಯ ವರ್ಚಸ್ಸು ಹೆಚ್ಚಿಸಿಕೊಂಡಂತಾಗಿದೆ.