ನವದೆಹಲಿ: ಬಾಲಕೋಟ್ ವಾಯುದಾಳಿಗೆ ಎರಡು ವರ್ಷ. ಈ ಸಂದರ್ಭದಲ್ಲಿ ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೊಂಡಾಡಿದ್ದಾರೆ.
ಬಾಲಕೋಟ್ ವಾಯುದಾಳಿಯ ಯಶಸ್ಸು ಭಯೋತ್ಪಾದನೆ ವಿರುದ್ಧ ಭಾರತದ ಕಟ್ಟುನಿಟ್ಟಿನ ಕ್ರಮವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ. ಬಾಲಕೋಟ್ ವಾಯುದಾಳಿಯ ವಾರ್ಷಿಕೋತ್ಸವದಂದು, ಭಾರತೀಯ ವಾಯುಪಡೆಯ ಅಸಾಧಾರಣ ಧೈರ್ಯ ಮತ್ತು ಶ್ರದ್ಧೆಗೆ ನಮಸ್ಕರಿಸುತ್ತೇನೆ. ಬಾಲಕೋಟ್ ಸ್ಟ್ರೈಕ್ ಯಶಸ್ಸು ಭಯೋತ್ಪಾದನೆ ವಿರುದ್ಧ ಭಾರತದ ದೃಢ ನಿಲುವನ್ನು ತೋರಿಸಿದೆ.
ಭಾರತವನ್ನು ಸುರಕ್ಷಿತವಾಗಿಡುವ ನಮ್ಮ ಸಶಸ್ತ್ರ ಪಡೆಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಗೃಹ ಸಚಿವ ಅಮಿತ್ ಶಾ ಸ್ಮರಣೆ ಮಾಡಿ, 2019 ರಲ್ಲಿ ಈ ದಿನ, ಭಾರತೀಯ ವಾಯುಪಡೆಯು ಪುಲ್ವಾಮಾ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯಿಸುವ ಮೂಲಕ ಭಯೋತ್ಪಾದನೆ ವಿರುದ್ಧ ಹೊಸ ಭಾರತದ ನೀತಿಗಳನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಎಂದು ಹೇಳಿದ್ದಾರೆ.
ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ನಮನ ಸಲ್ಲಿಸಿದ ಅಮಿತ್ ಶಾ, ದೇಶ ಮತ್ತು ಸೈನಿಕರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿದ್ದಾರೆ. ಪುಲ್ವಾಮಾ ದಾಳಿಯ ಹುತಾತ್ಮರನ್ನು ನಾನು ನೆನಪಿಸಿಕೊಳ್ಳುತ್ತೇನೆ ಮತ್ತು ವಾಯುದಾಳಿಗಳಿಯಲ್ಲಿ ಐಎಎಫ್ ತೋರಿದ ಧೈರ್ಯಕ್ಕೆ ನಮಸ್ಕರಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನದಲ್ಲಿ ದೇಶ ಮತ್ತು ಅದರ ಸೈನಿಕರು ಸುರಕ್ಷಿತರಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಬಾಲಕೋಟ್ ವಾಯುದಾಳಿ: ಫೆಬ್ರವರಿ 14 ರಂದು ದಕ್ಷಿಣ ಕಾಶ್ಮೀರದ ಪುಲ್ವಾಮಾ ಬಳಿಯ ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಬೆಂಗಾವಲು ಪಡೆಯನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಎಂ) ನಡೆಸಿದ ದಾಳಿಯಲ್ಲಿ ಭಾರತದ 40 ಯೋಧರು ಹುತಾತ್ಮರಾಗಿದ್ದರು.
ಕೆಲವು ದಿನಗಳ ನಂತರ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಾಲಕೋಟ್‌ನಲ್ಲಿರುವ ಜೆಎಂ ಶಿಬಿರದ ಮೇಲೆ ಪುಲ್ವಾಮಾ ದಾಳಿಗೆ ಪ್ರತೀಕಾರ ನಡೆಸಿತು. 2019ರ ಫೆಬ್ರವರಿ 26 ರ ಮುಂಜಾನೆ ವಾಯುದಾಳಿ ನಡೆಸಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಮಿಲಿಟರಿ ಸ್ಥಾಪನೆಗಳನ್ನು ಗುರಿಯಾಗಿಸಿಕೊಂಡು ಮರುದಿನ ಆಕ್ರಮಣವನ್ನು ನಡೆಸಲು ಪಾಕಿಸ್ತಾನದ ಪ್ರಯತ್ನಗಳನ್ನು ಭಾರತೀಯ ವಾಯುಪಡೆ ವಿಫಲವಾಗಿಸಿತು.
ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್, ಮಿಗ್ -21 ಬೈಸನ್ ಯುದ್ಧ ವಿಮಾನವನ್ನು ಹಾರಿಸುತ್ತಾ, ಪಾಕಿಸ್ತಾನದ ಜೆಟ್‌ಗಳನ್ನು ಬೆನ್ನಟ್ಟುತ್ತಾ, ಪಿಒಕೆ ದಾಟಿ ಹೋಗಿ ಪಾಕಿಸ್ತಾನದ ವಿಮಾನವನ್ನು ಹೊಡೆದುರುಳಿಸಿತು. ಅವರನ್ನು ಪಾಕಿಸ್ತಾನ ವಶಕ್ಕೆ ತೆಗೆದುಕೊಂಡಿತು. ಪಾಕಿಸ್ತಾನದ ಫೈಟರ್ ಜೆಟ್ ಅನ್ನು ಭಾರತವೂ ಹೊಡೆದುರುಳಿಸಿತು.