ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಲಸಿಕೆಗೆ 250 ರೂಪಾಯಿಗಳ ಬೆಲೆ ನಿಗದಿಪಡಿಸಿರುವ ಸರ್ಕಾರದ ಕ್ರಮಕ್ಕೆ ಲಸಿಕೆ ತಯಾರಕರು ಅಸಮಾಧಾನ ವ್ಯಕ್ತಪಡಿಸಿದ್ದು, ಸರ್ಕಾರ ಸಬ್ಸಿಡಿ ನೀಡಲು ಚಿಂತನೆ ನಡೆಸಲಾಗುತ್ತಿದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸರ್ಕಾರ ಲಸಿಕೆ ತಯಾರಕರಿಗೆ ಸಬ್ಸಿಡಿ ನೀಡುವ ಚಿಂತನೆ ನಡೆಸುತ್ತಿದೆ. ಆದರೆ ಸಬ್ಸಿಡಿಯ ವಿವರಗಳು ಲಭ್ಯವಿಲ್ಲ.
ಮಾ.1 ರಿಂದ ದೇಶಾದ್ಯಂತ ಹೆಚ್ಚಿನ ವ್ಯಾಪ್ತಿಯಲ್ಲಿ ಕೋವಿಡ್-19 ಲಸಿಕೆ ಅಭಿಯಾನ ಪ್ರಾರಂಭವಾಗುವುದಕ್ಕೂ ಮುನ್ನ ಈ ಬೆಳವಣಿಗೆಯಾಗಿದೆ.
ಫೆ.27 ರಂದು ಅಂತಿಮಗೊಂಡಿರುವ ನಿಯಮಗಳ ಪ್ರಕಾರ ಮಾ.1 ರಿಂದ ಮುಂದಿನ ಹಂತದ ಲಸಿಕೆ ಅಭಿಯಾನದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ವ್ಯಕ್ತಿಗಳಿಗೆ ಹಾಗೂ ಬಹುವಿಧದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಲಸಿಕೆಗಳಿಗೆ 250 ರೂಪಾಯಿ ಶುಲ್ಕವನ್ನು ನಿಗದಿಪಡಿಸಲಾಗಿದ್ದು ಇದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುವುದನ್ನು ಸರ್ಕಾರ ನಿರ್ಬಂಧಿಸಿದೆ. 250 ರೂಪಾಯಿಗಳ ಪೈಕಿ 150 ರೂಪಾಯಿಗಳು ಲಸಿಕೆ ಕಂಪನಿಗಳು ಪಡೆಯಲಿವೆ ಹಾಗೂ ಆಸ್ಪತ್ರೆಗಳಿಗೆ 100 ರೂಪಾಯಿಗಳು ಪ್ರತಿ ಲಸಿಕೆಗೆ ದೊರೆಯಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆಯನ್ನು ಫಲಾನುಭವಿಗಳಿಗೆ ಉಚಿತವಾಗಿ ನೀಡಲಾಗುತ್ತದೆ.
ಭಾರತದ ಪ್ರಮುಖ ಲಸಿಕೆ ತಯಾರಕ ಸಂಸ್ಥೆಗಳಾದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಬೆಲೆ ನಿಗದಿ ಹಾಗೂ ನಿಯಂತ್ರಣಕ್ಕೆ ಬದ್ಧವಾಗಿರುವುದಾಗಿ ಹೇಳಿದೆ ಆದರೆ ಅಸಮಾಧಾನವಿದೆ ಎಂದು ಸಂಸ್ಥೆಗಳು ಹೇಳಿವೆ.
"ಸರ್ಕಾರ ಪ್ರತಿಯೊಂದು ಲಸಿಕೆಗಳನ್ನು ಮೊದಲು ಖರೀದಿಸುತ್ತದೆ. ಆಸ್ಪತ್ರೆಗಳು ಪ್ರತಿ ಡೋಸ್ ಗೆ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರಕ್ಕೆ 150 ರೂಪಾಯಿಗಳನ್ನು ನೀಡಬೇಕಾಗುತ್ತದೆ. ಈಗ ಸರ್ಕಾರ ಅತ್ಯಂತ ಕಷ್ಟವಾಗಿರುವ ಬೆಲೆಯನ್ನು ನಿಗದಿಪಡಿಸಿದೆ. ಹೆಚ್ಚು ಪೈಪೋಟಿ ಇಲ್ಲದೆಯೂ ಕಡಿಮೆ ಬೆಲೆ ನಿಗದಿಪಡಿಸಲಾಗಿದೆ. ಆದ್ದರಿಂದ ಸರ್ಕಾರ ಸಬ್ಸಿಡಿ ನೀಡುವ ಚಿಂತನೆಯಲ್ಲಿದೆ ಎಂದು ಲಸಿಕೆ ತಯಾರಕ ಸಂಸ್ಥೆಗಳು ತಿಳಿಸಿವೆ.
ಡಬ್ಲ್ಯುಹೆಚ್‌ಒ ಪ್ರತಿ ಡೋಸ್ ಗೆ 3 ಡಾಲರ್ ನ್ನು ನಿಗದಿಪಡಿಸಿರುವಾಗ ಅದನ್ನು 2 ಡಾಲರ್ ಗೆ ಇಳಿಕೆ ಮಾಡುವುದೇಕೆ? ಎಂಬ ಪ್ರಶ್ನೆಗಳೂ ಇದೇ ವೇಳೆ ಮೂಡಿವೆ.