ಮುಂಬೈ: 'ಕೋವಿಡ್ 19' ಸಾಂಕ್ರಾಮಿಕದ ಪ್ರಕರಣಗಳ ಸಂಖ್ಯೆ ಏರುತ್ತಿರುವ ಕಾರಣ ಮಹಾರಾಷ್ಟ್ರ ಸರ್ಕಾರ, ವಿದರ್ಭ ಪ್ರಾಂತ್ಯದ ಯವತ್ಮಾಲ್, ಅಮರಾವತಿ ಮತ್ತು ಅಕೋಲಾ ನಗರಗಳಲ್ಲಿ ಯಾವುದೇ ಕ್ಷಣದಲ್ಲಿ 'ಕಟ್ಟುನಿಟ್ಟಿನ ಲಾಕ್‌ಡೌನ್' ನಿಯಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಉಪ ಮುಖ್ಯಮಂತ್ರಿ ಅಜತ್ ಪವಾರ್ ಅವರು ಗುರುವಾರ ಚರ್ಚೆ ನಡೆಸಿದ್ದಾರೆ.
ಕೊರೊನಾ ಸೋಂಕಿನ ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ಒಬ್ಬರು ಸರ್ಕಾರಿ ವೈದ್ಯರನ್ನು ಅಮರಾವತಿಗೆ ಕಳುಹಿಸಲಾಗಿದೆ. ಅವರು ದೂರವಾಣಿ ಮೂಲಕ ನಗರದಲ್ಲಿರುವ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಮಹಾರಾಷ್ಟ್ರದಲ್ಲಿ ಬುಧವಾರ 4,787 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿವೆ. ಇದು ಈ ವರ್ಷದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ವರದಿಯಾಗಿರುವ ಸೋಂಕಿನ ಪ್ರಕರಣಗಳಾಗಿವೆ. ಅಮರಾವತಿಯಲ್ಲಿ ಒಂದು ದಿನದಲ್ಲಿ ಅತಿ ಹೆಚ್ಚು ಸೋಂಕಿನ ಪ್ರಕರಣಗಳು ದಾಖಲಾಗಿವೆ. ಈ ಜಿಲ್ಲೆಯಲ್ಲಿ ಮಂಗಳವಾರ 82 ಪ್ರಕರಣಗಳು ವರದಿಯಾಗಿತ್ತು, ಬುಧವಾರ 230 ಸೋಂಕಿನ ಪ್ರಕರಣಗಳು ದಾಖಲಾಗಿವೆ. ಅಕೋಲಾ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬುಧವಾರ 105 ಪ್ರಕರಣಗಳು ದಾಖಲಾಗಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.