ವಿಶ್ವಸಂಸ್ಥೆ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ. ಪ್ರತಿಭಟನೆ ವೇಳೆ ಸಾಧ್ಯವಾದಷ್ಟು ಸಂಯಮದಿಂದ ವರ್ತಿಸುವಂತೆ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾಕಾರರಿಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಒತ್ತಾಯಿಸಿದೆ.
ದೆಹಲಿ ಗಡಿಭಾಗದಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಕಡಿತಗೊಳಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾನವ ಹಕ್ಕುಗಳ ಮಂಡಳಿ, ಶಾಂತಿಯುತವಾಗಿ ಪ್ರತಿಭಟನೆ ನಡೆಸುವವರಿಗೆ ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ಅವಕಾಶಗಳನ್ನು ನೀಡಬೇಕು ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಂಡಳಿ, ದೆಹಲಿಯ ಗಡಿಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆ ವೇಳೆ ಸಾಧ್ಯವಾದಷ್ಟು ಸಂಯಮ ತೋರಿಸುವಂತೆ ನಾವು ಸರ್ಕಾರ ಮತ್ತು ಪ್ರತಿಭಟನಾಕಾರರಿಗೆ ಒತ್ತಾಯಿಸುತ್ತೇವೆ. ಶಾಂತಿಯುತವಾಗಿ ಹೋರಾಟ ಮಾಡುವ ಹಕ್ಕುಗಳನ್ನು ಕಾಪಾಡಬೇಕು. ಮಾನವ ಹಕ್ಕುಗಳ ವಿಚಾರದಲ್ಲಿ ಸಮಾನ ಪರಿಹಾರಗಳನ್ನು ಕಂಡುಕೊಳ್ಳುವುದು ಮುಖ್ಯವಾಗಿರುತ್ತದೆ ಎಂದು ಮಾನವ ಹಕ್ಕುಗಳ ಮಂಡಳಿ ಒತ್ತಾಯಿಸಿದೆ.