ಲಖನೌ: ಉತ್ತರ ಪ್ರದೇಶದಲ್ಲಿ ನಡೆದ ಮಹತ್ವದ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯಪಡೆ ಪೊಲೀಸರು ಹಾಗೂ ಕೇಂದ್ರೀಯ ದಳಗಳು ಸ್ಫೋಟಕಗಳ ಸಹಿತವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಇಬ್ಬರು ಸದಸ್ಯರನ್ನು ಬಂಧಿಸಿದ್ದಾರೆ.
ಫೆ.16 ರಂದು (ಮಂಗಳವಾರ) ರಾತ್ರಿ ಈ ಕಾರ್ಯಾಚರಣೆ ನಡೆದಿದ್ದು ಉತ್ತರ ಪ್ರದೇಶದ ಹಲವೆಡೆ ಸ್ಫೋಟ ನಡೆಸಲು ರೂಪಿಸಲಾಗಿದ್ದ ಸಂಚು ಈ ಮೂಲಕ ವಿಫಲಗೊಂಡಿದೆ.
ಪೊಲೀಸ್ ಮಾಹಿತಿಯ ಪ್ರಕಾರ ಇಬ್ಬರು ಬಂಧಿತರೂ ಕೇರಳ ಮೂಲದವರಾಗಿದ್ದು, ಉತ್ತರ ಪ್ರದೇಶದ ಹಲವೆಡೆ ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಲಖನೌ ಹೊರವಲಯದ ಪಿಕ್ನಿಕ್ ಸ್ಪಾಟ್ ರಸ್ತೆಯಲ್ಲಿ ಇಬ್ಬರನ್ನು ಬಂಧಿಸಲಾಗಿದ್ದು, ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತರನ್ನು ಅಂಶದ್ ಬದ್ರುದ್ದೀನ್ ಹಾಗೂ ಪಿರೋಜ್ ಖಾನ್ ಎಂದು ಗುರುತಿಸಲಾಗಿದೆ..
ಕಾನೂನು ಸುವ್ಯವಸ್ಥೆ ಎಡಿಜಿ ಪ್ರಶಾಂತ್ ಕುಮಾರ್ ಅವರ ಹೇಳಿಕೆಯ ಪ್ರಕಾರ ಎಲ್ಲಾ 16 ಸ್ಫೋಟಕ ಸಾಧನಗಳಲ್ಲಿ ಬ್ಯಾಟರಿಗಳು, ಡಿಟೋನೇಟರ್ ಗಳು, ಪಿಸ್ತೂಲ್ ಹಾಗೂ ಜೀವಂತ ಕಾರ್ಟಿ ಕಾರ್ಟ್ರಿಜ್ಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಫೆ.17 ರಂದು ಪಾಪ್ಯುಲರ್ ಫ್ರಂಟ್ ದಿನಾಚರಣೆಯ ಅಂಗವಾಗಿ, ಉತ್ತರ ಪ್ರದೇಶದಾದ್ಯಂತ ಸ್ಫೋಟ ನಡೆಸುವುದಕ್ಕಾಗಿ ರೂಪಿಸಿದ್ದ ಯೋಜನೆಯನ್ನು ಪೊಲೀಸರೆದುರು ಬಂಧಿತರು ಒಪ್ಪಿಕೊಂಡಿದ್ದಾರೆ.