ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ನಡೆಸುತ್ತಿರುವ ಕಸ್ಟಮ್ಸ್ ಆಯುಕ್ತರಿಗೆ ಅಪಾಯವನ್ನುಂಟುಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮುಕ್ಕಂ ಮೂಲದ ಜಾಸಿಮ್ ಮತ್ತು ತನ್ಸೀಮ್ ಇಬ್ಬರನ್ನೂ ಕೊಂಡೋಟ್ಟಿ ಪೋಲೀಸರು ಬಂಧಿಸಿದ್ದಾರೆ. ಕಸ್ಟಮ್ಸ್ ಆಯುಕ್ತರನ್ನು ಹಿಂಬಾಲಿಸಿದ ವಾಹನವೂ ಪತ್ತೆಯಾಗಿದೆ.
ಮಲಪ್ಪುರಂ ಎಡವಣ್ಣಪ್ಪಾರ ಎಂಬಲ್ಲಿ ಘಟನೆ ಶುಕ್ರವಾರ ನಡೆದಿತ್ತು. ಶುಕ್ರವಾರ ವಯನಾಡ್ ನ ಕಲ್ಪೆಟ್ಟಕ್ಕೆ ಆಗಮಿಸಿದ್ದ ಕಸ್ಟಮ್ಸ್ ಆಯುಕ್ತ ಸುಮಿತ್ ಕುಮಾರ್ ಮಧ್ಯಾಹ್ನ ಮರಳುತ್ತಿದ್ದಾಗ ಘಟನೆ ನಡೆದಿತ್ತು. ಮಧ್ಯಾಹ್ನ 2.45 ರ ಸುಮಾರಿಗೆ ನಾಲ್ಕು ವಾಹನಗಳು ಎಡವಣ್ಣಪ್ಪಾರದಲ್ಲಿ ಆಯುಕ್ತರ ವಾಹನವನ್ನು ಹಿಂಬಾಲಿಸಿಸುತ್ತಿರುವುದು ಗಮನಕ್ಕೆ ಬಂತು. ಬಳಿಕ ಆ ನಾಲ್ಕೂ ವಾಹನಗಳನ್ನು ನಾಟಕೀಯವಾಗಿ ಸೆರೆಹಿಡಿಯಲಾಯಿತು.
ಎರಡು ಬೈಕ್ ಮತ್ತು ಎರಡು ಕಾರಿನಲ್ಲಿದ್ದ ತಂಡ ಆಯುಕ್ತರನ್ನು ಕೊಂಡೋಟ್ಟಿಯವರೆಗೆ ಹಿಂಬಾಲಿಸಿತ್ತು. ಆಯುಕ್ತರ ದೂರಿನ ಮೇರೆಗೆ ಕೊಂಡೋಟ್ಟಿ ಪೋಲೀಸರು ಪ್ರಕರಣ ದಾಖಲಿಸಿದ್ದರು. ಪೋಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಬಂಧಿತರು ಚಿನ್ನ ಕಳ್ಳಸಾಗಣೆ, ಹವಾಲಾದಲ್ಲಿ ಭಾಗಿಯಾಗಿಲ್ಲ ಮತ್ತು ವಿದೇಶಕ್ಕೆ ಹೋಗಿರಲಿಲ್ಲ ಎನ್ನಲಾಗಿದೆ. ಕಸ್ಟಮ್ಸ್ ಆಯುಕ್ತರ ದೂರು ಅನುಮಾನಾಸ್ಪದವಲ್ಲ ಎಂದೂ ಪೋಲೀಸರು ತಿಳಿಸಿದ್ದಾರೆ.