ಗುರುವಾಯೂರ್: ಗುರುವಾಯೂರ್ ದೇವಸ್ಥಾನದ ಜಾತ್ರೋತ್ಸವದ ವೇಳೆ ಗುರುವಾಯೂರ್ ನಿಂದ ಗಂಜಿ ಮತ್ತು ಪೂಜಾ ಆಹಾರ ಕಿಟ್‍ಗಳನ್ನು ಮನೆಗೆ ವಿತರಿಸಲು ಸಿದ್ದತೆಗಳು ಫೂರ್ಣಗೊಂಡಿದೆ. ಕೊರೋನಾ ನಿಬಂಧನೆಗಳ ಕಾರಣ ಗಂಜಿ ಮತ್ತು ಪ್ರಸಾದಗಳನ್ನು ದೇವಾಲಯದಲ್ಲೇ ವಿತರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಕಿಟ್ ನ್ನು 10,000 ಕುಟುಂಬಗಳಿಗೆ ವಿತರಿಸಲಾಗುವುದು. ಐದು ಕಿಲೋಗ್ರಾಂಗಳಷ್ಟು ಅಕ್ಕಿ, ಒಂದು ಕಿಲೋಗ್ರಾಂ ಹುರುಳಿ, ಬೆಲ್ಲ, ತೆಂಗಿನಕಾಯಿ, ತೆಂಗಿನ ಎಣ್ಣೆ ಮತ್ತು ಉಪ್ಪನ್ನು ಒಳಗೊಂಡಿರುವ ಕಿಟ್ ನ್ನು ಪ್ರಾಯೋಜಕರ ಮೂಲಕ ಮನೆಗಳಿಗೆ ತಲುಪಿಸಲಾಗುತ್ತದೆ.
ಭಕ್ತರಿಗೆ ವಿತರಿಸಬೇಕಾದ ಇನ್ನಿತರ ಆಹಾರ ಕಿಟ್‍ಗಳು ಕೌಸ್ತುಭಮ್ ಮೈದಾನವನ್ನು ತಲುಪಿವೆ. ಪೂರ್ವ ನಿಗದಿತ ಮಂದಿಗೆ ನೀಡಲಾದ ಮುಂಗಡ ಕೂಪನ್ ಪ್ರಕಾರ, ಕೂಪನ್ ನಲ್ಲಿ ಉಲ್ಲೇಖಿಸಲಾದ ದಿನಾಂಕಗಳಂದು ಕೌಸ್ತುಭಮ್ ಕಾಂಪೌಂಡ್‍ನ "ನಾರಾಯಣೀಯಂ" ಹಾಲ್ ನಲ್ಲಿ ಆಹಾರ ಕಿಟ್‍ಗಳನ್ನು ವಿತರಿಸಲಾಗುವುದು. ಗುರುವಾಯೂರ್ ಜಾತ್ರೆಯ ಪ್ರಮುಖ ಆಕರ್ಷಣೆ ಮತ್ತು ಪರಂಪರೆಯ ಒಂದು ಅಂಗ ಗಂಜಿ ಮತ್ತು ಹುರುಳಿ ಪ್ರಸಾದವಾಗಿದ್ದು, ಅದಕ್ಕೆಂದೇ ಸಾವಿರಾರು ಜನರು ಭಾಗವಹಿಸುವುದು ವಾಡಿಕೆಯಾಗಿದೆ.