ಕಾಸರಗೋಡು: ಜಿಲ್ಲೆಯ ಕೆಲವೆಡೆ ಇಲಿಜ್ವರ ವರದಿಯಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ನಿತ್ರಾಣ ಸಹಿತ ಜ್ವರ, ತಲೆನೋವು, ಮಾಂಸ ಪೇಷಿಗಳ ನೋವು ಇಲಿಜ್ವರದ ಪ್ರಮುಖ ಲಕ್ಷಣಗಳಾಗಿವೆ. ಕಣ್ಣುಗಳು ಕೆಂಪು ಬಣ್ಣಕ್ಕೆ ತಿರುಗುವುದು, ಮೂತ್ರದ ಪ್ರಮಾಣದಲ್ಲಿ ಕಡಿತ, ಹಳದಿಕಾಮಾಲೆ ಲಕ್ಷಣಗಳು ಇತ್ಯಾದಿ ಕಂಡುಬರಬಹುದು. ಇಲಿ, ನಾಯಿ,ಜಾನುವಾರುಗಳ ಮೂತ್ರದ ಮೂಲಕವೂ ಇಲಿಜ್ವರ ಹರಡುತ್ತದೆ. ಮೂತ್ರ ಮಣ್ಣು, ನೀರಲ್ಲಿ ಬೆರೆತು ಮಾನವ ದೇಹದ ಹುಣ್ಣು, ಗಾಯ ಇತ್ಯಾದಿಗಳ ಮೂಲಕ ಒಳಪ್ರವೇಶಿಸುತ್ತದೆ. ಗದ್ದೆಗಳಲ್ಲಿ, ಚರಂಡಿ, ಹಳ್ಳ ಇತ್ಯಾದಿಗಳಲ್ಲಿ ದುಡಿಯುವವರು, ಪ್ರಾಣಿ ಸಾಕಣೆ ನಡೆಸುವವರು ಮುಂತಾದವರಿಗೆ ಈ ರೋಗ ಸಾಧ್ಯತೆ ಅಧಿಕವಾಗಿರುತ್ತದೆ.
ರೋಗಪ್ರತಿರೋಧ ವಿಧಾನಗಳು:
ಪ್ರಾಣಿ ಸಾಕಣೆ ನಡೆಸುವವರು ಗ್ಲೌಸ್, ದೊಡ್ಡ ಗಾತ್ರದ ರಬ್ಬರ್ ಬೂಟು ಧರಿಸಬೇಕು. ನಾಯಿ, ಬೆಕ್ಕು,ಜಾನುವಾರುಗಳ ಮಲಮೂತ್ರ ಶುಚೀಕರಣ ನಡೆಸುವ ವೇಳೆ ಜಾಗರೂಕತೆ ಪಾಲಿಸಬೇಕು. ನೀರು ದಾಸ್ತಾನಾಗುವ ಕಡೆ ಮಕ್ಕಳು ಆಟವಾಡದಂತೆ ಜಾಗರೂಕತೆ ವಹಿಸಬೇಕು. ಆಹಾರ ಪದಾರ್ಥಗಳನ್ನು ಭದ್ರವಾಗಿ ಮುಚ್ಚಿ ಇರಿಸಬೇಕು. ಮಲಿನಜಲ ಸಂಪರ್ಕದೊಂದಿಗೆ ಕೆಲಸ ನಡೆಸುವವರು ವಾರಕ್ಕೊಮ್ಮೆ ಎಂಬಂತೆ 6 ವಾರಗಳ ಕಾಲ ಡಾಕ್ಸಿ ಸೈಕ್ಲಿನ್ ಮಾತ್ರೆ ಸೇವಿಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗ ಪ್ರತಿರೋಧ ಗುಳಿಗೆಗಳು ಉಚಿತವಾಗಿ ಲಭ್ಯವಿದ್ದು, ಯಾವುದೇ ಸಂಶಯಗಳಿದ್ದಲ್ಲಿ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯನ್ನು ಸಂಪರ್ಕಿಸುವಂತೆ ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ.