ಸಿಡ್ನಿ: ಜಗತ್ತಿನ ಅನೇಕ ದೇಶಗಳಲ್ಲಿ ಬುಧವಾರ ತೀವ್ರ ಪ್ರಮಾಣದ ಭೂಕಂಪ ಸಂಭವಿಸಿದೆ. ದಕ್ಷಿಣ ಪೆಸಿಫಿಕ್ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ 7.7 ತೀವ್ರತೆಯ ಭೂಕಂಪ ಉಂಟಾಗಿದೆ. ಇದರಿಂದ ನ್ಯೂಜಿಲೆಂಡ್, ವನೌಟು, ನ್ಯೂ ಕ್ಯಾಲೆಡೋನಿಯಾ ಮತ್ತು ಈ ಭಾಗದ ಇತರೆ ದೇಶಗಳಲ್ಲಿ ಸುನಾಮಿ ಭೀತಿ ಉಂಟಾಗಿದೆ.
ಇನ್ನೊಂದೆಡೆ ಪಶ್ಚಿಮ ಇಂಡೋನೇಷ್ಯಾದಲ್ಲಿ 6.2 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ಬೆಂಗ್‌ಕುಲು ಪ್ರಾಂತ್ಯದ ಬೆಂಗ್‌ಕುಲು ನಗರದ ದಕ್ಷಿಣ-ನೈಋತ್ಯ ಭಾಗದಲ್ಲಿ 10 ಕಿಮೀ ಆಳದಲ್ಲಿ ಭೂಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ. ಇಂಡೋನೇಷ್ಯಾದ ಹವಾಮಾನ, ಭೂಕಂಪಶಾಸ್ತ್ರ ಸಂಸ್ಥೆಯು ಇದುವರೆಗೂ ಸುನಾಮಿ ಎಚ್ಚರಿಕೆ ನೀಡಿಲ್ಲ. ಯಾವುದೇ ಸಾವು ನೋವು ವರದಿಯಾಗಿಲ್ಲ.
ದಕ್ಷಿಣ ಪೆಸಿಫಿಕ್ ಪ್ರದೇಶದಲ್ಲಿ ಗುರುವಾರ ಮಧ್ಯರಾತ್ರಿ ನ್ಯೂ ಕ್ಯಾಲೆಡೋನಿಯಾದ ವಾಯೊ ಪಟ್ಟಣದ ಪೂರ್ವ ಭಾಗದಿಂದ 415 ಕಿಮೀ ದೂರದಲ್ಲಿ 10 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ. ಮುಂದಿನ ಮೂರು ಗಂಟೆಗಳಲ್ಲಿ ಈ ಭೂಕಂಪನದಿಂದ ಭೀಕರ ಸುನಾಮಿ ಅಲೆಗಳು ಏಳುವ ಸಂಭವವಿದೆ ಎಂದು ಎನ್‌ಡಬ್ಲ್ಯೂಎಸ್ ಪೆಸಿಫಿಕ್ ಸುನಾಮಿ ಕೇಂದ್ರ ಎಚ್ಚರಿಕೆ ನೀಡಿದೆ.
ಆಸ್ಟ್ರೇಲಿಯಾ, ಕುಕ್ ಐಲ್ಯಾಂಡ್ಸ್ ಮತ್ತು ಅಮೆರಿಕದ ಸಮೋವಾದಲ್ಲಿನ ಭಾಗಗಳ ಸಮುದ್ರದಲ್ಲಿ ಸಣ್ಣ ಪ್ರಮಾಣದ ಅಲೆಗಳು ಎದ್ದಿವೆ. ಫಿಜಿ, ನ್ಯೂಜಿಲ್ಯಾಂಡ್ ಮತ್ತು ವನೌಟುಗಳ ಕೆಲವು ಕರಾವಳಿಗಳಲ್ಲಿ 0.3 ರಿಂದ 1 ಮೀಟರ್ ಎತ್ತರದವರೆಗೂ ಅಲೆಗಳು ಏಳುತ್ತಿವೆ.