HEALTH TIPS

ಕ್ಷಣದಲ್ಲಿ ಕೋವಿಡ್ ಟೆಸ್ಟ್: ಭಾರತೀಯ ಸೇನೆಯಲ್ಲಿ ಪರೀಕ್ಷೆಗೆ ಶ್ವಾನಗಳ ಬಳಕೆ

          ನವದೆಹಲಿ: ಕೋವಿಡ್-19 ಪರೀಕ್ಷೆ ವಿಳಂಬವನ್ನು ತಪ್ಪಿಸಲು ಭಾರತೀಯ ಸೇನೆ ಕೋವಿಡ್ ಪರೀಕ್ಷೆಗೆ ತನ್ನ ತರಬೇತಿ ಪಡೆದ ಶ್ವಾನಗಳನ್ನು ಬಳಸುತ್ತಿದೆ.

        ಸ್ಫೋಟಕ ಮತ್ತು ಮಾದಕ ವಸ್ತುಗಳ ಪತ್ತೆ, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ನೆರವಾಗುತ್ತಿದ್ದ ಸಶಸ್ತ್ರ ಪಡೆಗಳ ಶ್ವಾನಗಳನ್ನು ಇದೀಗ ಕೋವಿಡ್ ಪರೀಕ್ಷೆಗೆ ಬಳಸಿಕೊಳ್ಳಲಾಗುತ್ತಿದೆ.

ಎರಡು ವರ್ಷದ ಕಾಕರ್ ಸ್ಪೈನಿಯಲ್ ಕ್ಯಾಸ್ಪರ್ ಮತ್ತು ತಮಿಳುನಾಡಿನ ಸ್ಥಳೀಯ ತಳಿ 'ಚಿಪ್ಪಿಪಾರೈ'ನ 'ಜಯಾ' ಎಂಬ ಹೆಸರಿನ ಒಂದು ವರ್ಷದ ಶ್ವಾನಕ್ಕೆ ಮೂತ್ರ ಮತ್ತು ಬೆವರನ್ನು ಮೂಸಿ ಕೋವಿಡ್-19 ಪರೀಕ್ಷೆ ನಡೆಸುವ ತರಬೇತಿ ನೀಡಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.

ದೆಹಲಿಯ ಕಂಟೋನ್ಮೆಂಟ್‌ನ ಮಿಲಿಟರಿ ಪಶುವೈದ್ಯಕೀಯ ಆಸ್ಪತ್ರೆಯ ಆವರಣದಲ್ಲಿ ಮಾದರಿಗಳನ್ನು ಬಳಸಿಕೊಂಡು ಶ್ವಾನಗಳ ಕೌಶಲ್ಯದ ಪ್ರದರ್ಶನವನ್ನು ನಡೆಸಲಾಯಿತು. ಶ್ವಾನಗಳ ಮೇಲ್ವಿಚಾರಣೆ ಮಾಡುತ್ತಿದ್ದ ಸಿಬ್ಬಂದಿ ಪಿಪಿಇ ಕಿಟ್‌ಗಳನ್ನು ಧರಿಸುತ್ತಿದ್ದರು.

          ಈ ನಾಯಿಗಳು ಸೇನೆಗಷ್ಟೇ ಅಲ್ಲ, ಇಡೀ ಭಾರತಕ್ಕೆ ನೆರವಾಗಲಿವೆ ಎಂದು ಮೀರತ್‌ನ ಡಾಗ್ ಟ್ರೈನಿಂಗ್ ಫೆಸಿಲಿಟಿ ಆಫ್ ರಿಮೌಂಟ್ ಪಶುವೈದ್ಯಕೀಯ ದಳದ (ಆರ್‌ವಿಸಿ) ಕೇಂದ್ರದ ಬೋಧಕ ಲೆಫ್ಟಿನೆಂಟ್ ಕರ್ನಲ್ ಸುರಿಂದರ್ ಸೈನಿ ಹೇಳಿದ್ದಾರೆ.

      "ಬ್ರಿಟನ್, ಫಿನ್ ಲ್ಯಾಂಡ್, ಫ್ರಾನ್ಸ್, ರಷ್ಯಾ, ಜರ್ಮನಿ, ಲೆಬನಾನ್, ಯುಎಇ ಮತ್ತು ಅಮೆರಿಕದಂತಹ ದೇಶಗಳು ಈಗಾಗಲೇ ಕೋವಿಡ್ 19 ಪತ್ತೆ ಹಚ್ಚಲು ಶ್ವಾನಗಳಿಗೆ ತರಬೇತಿ ನೀಡಿವೆ. ಮಲೇರಿಯಾ, ಮಧುಮೇಹ ಮತ್ತು ಪಾರ್ಕಿನ್ಸನ್ ಕಾಯಿಲೆಗಳನ್ನು ಪತ್ತೆಹಚ್ಚಲು ನಾಯಿಗಳನ್ನು ಈ ಹಿಂದೆ ವಿದೇಶದಲ್ಲಿ ಬಳಸಲಾಗುತ್ತಿತ್ತು, ಆದರೆ, ಇದು ಭಾರತದಲ್ಲಿ ವೈದ್ಯಕೀಯ ಪತ್ತೆಗಾಗಿ ಮೊದಲ ಬಾರಿಗೆ ಶ್ವಾನಗಳನ್ನು ಬಳಸಲಾಗಿದೆ "ಎಂದು ಅವರು ಹೇಳಿದ್ದಾರೆ.

       ನಾಯಿಗಳನ್ನು ಎಲ್ಲಿ ನಿಯೋಜಿಸಲಾಗಿದೆ ಎಂಬ ಪ್ರಶ್ನೆಗೆ, ಉತ್ತರಿಸಿದ ಸೈನಿ ಸೆಪ್ಟೆಂಬರ್‌ನಲ್ಲಿ ತರಬೇತಿಯ ನಂತರ, ನವೆಂಬರ್‌ನಲ್ಲಿ ದೆಹಲಿಯ ಸೇನೆಯ ಶಿಬಿರದಲ್ಲಿ ಶ್ವಾನಗಳನ್ನು ನಿಯೋಜಿಸಲಾಗಿತ್ತು ಎಂದು ಹೇಳಿದರು. ಡಿಸೆಂಬರ್‌ನಿಂದ, ಅವುಗಳನ್ನು ಯೋಧರು ಲಡಾಕ್ ಸೇರಿದಂತೆ ದೂರದ ಪ್ರದೇಶಕ್ಕೆ ತೆರಳುವ ಚಂಡೀಗಡದ ಉತ್ತರದ ಕಮಾಂಡ್‌ನ ಸಾರಿಗೆ ಶಿಬಿರದಲ್ಲಿ ನಿಯೋಜಿಸಲಾಗಿತ್ತು ಎಂದಿದ್ದಾರೆ.

      "ಈ ಎರಡು ಶ್ವಾನಗಳಲ್ಲದೆ, ಮತ್ತೆ ನಾಲ್ಕು ಲ್ಯಾಬ್ರಡಾರ್‌ಗಳು ಸೇರಿದಂತೆ ಇತರ ಎಂಟು ನಾಯಿಗಳು ಸಹ ತರಬೇತಿ ಪಡೆಯುತ್ತಿವೆ" ಎಂದು ಸೈನಿ ಹೇಳಿದರು.

ಒಂದು ವರ್ಷದ ಮಣಿ ಎಂಬ ಹೆಸರಿನ ಮತ್ತೊಂದು ಚಿಪ್ಪಿಪಾರೈ ತಳಿಯ ಶ್ವಾನ ಸಹ ತರಬೇತಿ ಪಡೆಯುತ್ತಿದ್ದು, ಪ್ರದರ್ಶನದ ಸಮಯದಲ್ಲಿ ತನ್ನ ಕೌಶಲ್ಯವನ್ನು ತೋರಿಸಿದೆ. ಮಣಿ ಹೆಸರಿನ ಶ್ವಾನವು ಜಯಾ ಹೆಸರಿನ ಶ್ವಾನದ ಹಿರಿಯಣ್ಣ.

        "ಈ ರೀತಿ ತರಬೇತಿ ಪಡೆದ ಶ್ವಾನಗಳನ್ನು ಬಳಸುವುದರಿಂದ ಕೋವಿಡ್ ಪತ್ತೆಹಚ್ಚುವ ಕಾರ್ಯ ಶೀಘ್ರ ಮತ್ತು ನೈಜ ಸಮಯದಲ್ಲಿ ಸಾಧ್ಯವಾಗುತ್ತದೆ. ಆರ್‌ಟಿ-ಪಿಸಿಆರ್ ಮತ್ತು ರ್ಯಾಪಿಡ್ ಆಂಟಿಜೆನ್ ಟೆಸ್ಟ್‌ಗೆ ತಗುಲುವ ಸಮಯವನ್ನು ತಗ್ಗಿಸುತ್ತದೆ. ಸೇನೆಯಲ್ಲಿ ಸಮಯವು ಬಹುಮುಖ್ಯವಾಗಿದೆ. ಹಾಗಾಗಿ, ಈ ಶ್ವಾನಗಳನ್ನು ಬಳಸಿ ರಿಯಲ್ ಟೈಮಲ್ಲಿ ಕೋವಿಡ್ ಪರೀಕ್ಷೆ ನಡೆಸಬಹುದಾಗಿದೆ'ಎನ್ನುತ್ತಾರೆ ಬೋಧಕರು.

        ದೆಹಲಿ ಸಾರಿಗೆ ಶಿಬಿರದಲ್ಲಿ 800 ಮಾದರಿಗಳಿಂದ ಮತ್ತು ಚಂಡೀಗಡದ ಸಾರಿಗೆ ಶಿಬಿರದಲ್ಲಿ ಸುಮಾರು 3,000 ಮಾದರಿಗಳಿಂದ ನಾಯಿಗಳು 22 ಪಾಸಿಟಿವ್ ಪ್ರಕರಣಗಳನ್ನು ಪತ್ತೆಮಾಡಿವೆ ಎಂದು ಸೈನಿ ಹೇಳಿದರು.

     "ಕೋವಿಡ್ ಪತ್ತೆ ಸಂದರ್ಭ ಶ್ವಾನಗಳ ಪ್ರತಿಕ್ರಿಯೆ ಸಮಯ ಕೇವಲ ಒಂದು ಸೆಕೆಂಡ್ ಅಥವಾ ಅದಕ್ಕಿಂತಲೂ ಕಡಿಮೆಯಾಗಿದೆ. ನಿಖರತೆಯ ಪ್ರಮಾಣವು ಶೇಕಡಾ 90 ಕ್ಕಿಂತ ಹೆಚ್ಚಿದೆ" ಎಂದು ಅವರು ಹೇಳಿದ್ದಾರೆ.

       ಶ್ವಾನಗಳು ಪ್ರಯೋಗಾಲಯ ಮಾದರಿಗಳನ್ನು ಮೂಸಿ ಕೋವಿಡ್ ಪಾಸಿಟಿವ್ ಕಂಡುಬಂದರೆ ಕಂಟೇನರ್‌ನಲ್ಲಿ ಇರಿಸಲಾಗಿರುವ ಸ್ಯಾಂಪಲ್‌ನ ಪಕ್ಕದಲ್ಲಿ ಕುಳಿತುಕೊಳ್ಳಲು, ನೆಗೆಟಿವ್ ಬಂದರೆ ಮುಂದಕ್ಕೆ ತೆರಳಲು ತರಬೇತಿ ನೀಡಲಾಗಿದೆ.

       ತರಬೇತಿಯ ಉದ್ದೇಶಕ್ಕಾಗಿ ಮೀರತ್‌ನ ಮಿಲಿಟರಿ ಆಸ್ಪತ್ರೆ, ಮೀರತ್ ಕಂಟೋನ್ಮೆಂಟ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಸುಭಾರ್ತಿ ವೈದ್ಯಕೀಯ ಕಾಲೇಜಿನಿಂದ ಪಾಸಿಟಿವ್ ಮತ್ತು ಶಂಕಿತ ಪಾಸಿಟಿವ್ ಮಾದರಿಗಳನ್ನು ಪಡೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ಆರಂಭಿಕ ಪ್ರಯೋಗದಲ್ಲಿ 279 ಮೂತ್ರ ಮತ್ತು 267 ಬೆವರು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಎರಡೂ ನಾಯಿಗಳ ಸೂಕ್ಷ್ಮತೆ ಮತ್ತು ನಿರ್ದಿಷ್ಟತೆಯು ತುಂಬಾ ಹೆಚ್ಚಾಗಿದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

       ವೈಜ್ಞಾನಿಕವಾಗಿ, ಸೋಂಕಿತ ದೇಹದ ಅಂಗಾಂಶಗಳು "ವಿಶಿಷ್ಟ ಬಾಷ್ಪಶೀಲ ಚಯಾಪಚಯ ಬಯೋಮಾರ್ಕರ್‌ಗಳನ್ನು" ಬಿಡುಗಡೆ ಮಾಡುತ್ತವೆ, ಇದನ್ನು ವೈದ್ಯಕೀಯ ಪತ್ತೆ ನಾಯಿಗಳು ರೋಗ ಪತ್ತೆಗಾಗಿ ರೋಗ ಸನ್ನೆಗಳಾಗಿ ಬಳಸುತ್ತವೆ ಎಂದು ಅವರು ಹೇಳಿದರು.

      ಪ್ರಧಾನ ಮಂತ್ರಿ 'ಆತ್ಮನಿರ್ಭರ ಭಾರತ್'ನ ಉಪಕ್ರಮದಡಿಯಲ್ಲಿ ಕಾಕರ್ ಸ್ಪೈನಿಯಲ್ ಜೊತೆಗೆ ಸ್ಥಳೀಯ ತಳಿಯ ನಾಯಿಗೂ ಮೂತ್ರ ಮತ್ತು ಬೆವರಿನ ಮಾದರಿಯನ್ನು ಬಳಸಿ ತುಲನಾತ್ಮಕ ವಿಧಾನದಿಂದ ಕೋವಿಡ್ ಪತ್ತೆಹಚ್ಚುವ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

      ಈ ನಾಯಿಗಳನ್ನು ಅವುಗಳ ಮೇಲ್ವಿಚಾರಕರು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಾರೆ. ಅವುಗಳ ದೇಹದ ಉಷ್ಣತೆಯನ್ನು ಬೆಳಿಗ್ಗೆ ಮತ್ತು ಸಂಜೆ ದಾಖಲಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries